ಯಶಸ್ವಿನಿ ಯೋಜನೆ ಮರು ಜಾರಿ : ಸಚಿವ ಎಸ್ ಟಿ ಸೋಮಶೇಖರ್
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆ
ಅಕ್ಟೋಬರ್ 2 ರಂದು ಚಾಲನೆ
ಚಾಲನೆ ನೀಡಲಿರುವ ಸಿಎಂ ಬೊಮ್ಮಾಯಿ , ಅಮಿತ್ ಶಾ
ಅಕ್ಟೋಬರ್ 2 ನಂತರ ಸದಸ್ಯತ್ವ ಪಡೆಯಬಹುದು
ಯಶಸ್ವಿನಿ ಯೋಜನೆಯನ್ನ ಮರು ಜಾರಿಗೊಳಿಸುವುದಾಗಿ ರಾಜ್ಯ ಸಹಕಾರ ಸಚಿವ ಎಸ್. ಟಿ ಸೋಮಶೇಖರ್ ಅವರು ಹೇಳಿದ್ದಾರೆ..
ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಸಚಿವರು ಕಳೆದ 3 ವರ್ಷಗಳಿಂದ ಯಶಸ್ವಿನಿ ಯೋಜನೆ ಜಾರಿ ಮಾಡಿರಲಿಲ್ಲ.. ರೈತರು , ಸಹಕಾರಿಗಳು ಈ ಯೋಜನೆ ಜಾರಿಗೆ ಒತ್ತಾಯ ಮಾಡಿದ್ದು ಅಕ್ಟೋಬರ್ 2 ಗಾಂಧಿ ಜಯಂತಿಯಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾಗೂ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ..
ಇದಕ್ಕೆ ಅಕ್ಟೋಬರ್ 2ರ ನಂತರ ಸದಸ್ಯರಾಗಬಹುದು ಎಂದೂ ತಿಳಿಸಿದ್ಧಾರೆ.. ಅಲ್ಲದೇ ಈ ಹಿಂದೆ ಸದಸ್ಯರಾಗಿದ್ದವರೂ ಸಹ ಮತ್ತೆ ಸದಸ್ಯತ್ವವನ್ನ ಪಡೆದುಕೊಳ್ಳಬೇಕೆಂದು ಸಚಿವರು ಹೇಳಿದ್ದಾರೆ..
ಹೈನುಗಾರಿಕೆ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಸರ್ಕಾರ ಯೋಜನೆ ರೂಪಿಸುತ್ತಿದೆ. ಈಗಾಗಲೇ 26 ಲಕ್ಷ ರೈತರು ಹಾಲನ್ನು ಹಾಕುತ್ತಿದ್ದಾರೆ. ಅವರಿಗೆ ಪ್ರತ್ಯೇಕವಾಗಿ ನಂದಿನಿ ಕ್ಷೀರಾ ಸಮೃದ್ಧಿ ಬ್ಯಾಂಕ್ ಮಾಡಲು ರಿಸವ್‌ರ್ ಬ್ಯಾಂಕ್‌ನಿಂದ ಅನುಮತಿ ಪಡೆಯಲಾಗಿದ್ದು, ಅವರಿಗೆ ಪೂರಕ ಮಾಹಿತಿ, ದಾಖಲೆ ನೀಡಲಾಗಿದೆ. ಸುಮಾರು ವರ್ಷದಿಂದ ಹೊಸತಾಗಿ ಯಾರಿಗೂ ಕೋ-ಆಪರೇಟಿವ್ ಬ್ಯಾಂಕ್‌ಗೆ ಅವಕಾಶ ನೀಡಿಲ್ಲ. ಅದಕ್ಕಾಗಿ ಇದೀಗ ಅವಕಾಶ ನೀಡಲಾಗುತ್ತಿದೆ. ಮುಖ್ಯಮಂತ್ರಿಗಳ ಕನಸಿನ ಕೂಸಾದ ಈ ಬ್ಯಾಂಕ್, ಸಹಕಾರ ಕ್ಷೇತ್ರದ ಬ್ಯಾಂಕ್ ಆಗಿ ಜನತೆಗೆ ಸಹಕಾರ ನೀಡಲಿದೆ. ನಬಾರ್ಡ್‌ನಿಂದ ಇದಕ್ಕೆ ಬೇಕಾದ ಯೋಜನೆಗಳನ್ನು ಪಡೆಯಲು ಪ್ರಯತ್ನಿಸಲಾಗುವುದು. ಇದನ್ನೂ ಅಕ್ಟೋಬರ್‌ನಲ್ಲಿ ಆರಂಭಿಸಲಾಗುವುದು ಎಂದು ಸೋಮಶೇಖರ್ ಹೇಳಿದರು.
ಬೆಳೆಸಾಲ ನೀಡಲು ಕೃಷಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದ ಕೂಡಲೇ ಹಣ ಬಿಡುಗಡೆ ಮಾಡಲು ಪ್ರಯತ್ನಿಸಲಾಗುವುದು. ಅತಿವೃಷ್ಟಿಯಿಂದಾಗಿ ಬೆಳೆ ಹಾನಿಗೊಳಗಾದ ರೈತರಿಗೆ ಮತ್ತು ಮನೆ ಇತ್ಯಾದಿಗಳು ಹಾನಿಗೊಳಗಾದ ಕೃಷಿಕರಿಗೆ ತಕ್ಷಣ ಪರಿಹಾರ ವಿತರಿಸಲಾಗುತ್ತಿದೆ. 5 ಲಕ್ಷ, 3 ಲಕ್ಷ, 1ಲಕ್ಷ ಹಾಗೂ 50 ಸಾವಿರ ರು. ವರೆಗೆ ಜಿಲ್ಲಾಧಿಕಾರಿಗಳ ವರದಿಯನ್ನು ಆಧರಿಸಿ ತಕ್ಷಣ ಪರಿಹಾರ ವಿತರಿಸಲಾಗುತ್ತದೆ ಎಂದು ತಿಳಿಸಿದರು.








