ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ನಾಯಕರ ನಡುವಿನ ವಾಕ್ಸಮರ ಈಗ ಕೀಳುಮಟ್ಟದ ವೈಯಕ್ತಿಕ ನಿಂದನೆಗೆ ಬಂದು ತಲುಪಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಅತ್ಯಂತ ಕಠೋರ ಪದಬಳಕೆ ಮಾಡಿದ್ದು, ಯತ್ನಾಳ್ ಅವರನ್ನು ಯಾವುದೋ ಒಂದು ಕೋತಿಯ ಬ್ರೀಡ್ ಎಂದು ಏಕವಚನದಲ್ಲೇ ನಿಂದಿಸಿರುವುದು ಈಗ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಕಳೆದ ಕೆಲವು ದಿನಗಳಿಂದ ಪ್ರದೀಪ್ ಈಶ್ವರ್ ಅವರು ಪ್ರಧಾನಿ ಮೋದಿ ಕುರಿತು ಅವಹೇಳನಕಾರಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಸಂಬಂಧ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರದೀಪ್ ಈಶ್ವರ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಮತ್ತು ಅವರನ್ನು ದೇಶದ್ರೋಹಿ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಪತ್ರ ಬರೆದು ದೂರು ನೀಡಿದ್ದರು. ಈ ಬೆಳವಣಿಗೆಯಿಂದ ಕೆರಳಿದ ಪ್ರದೀಪ್ ಈಶ್ವರ್ ಈಗ ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ಯತ್ನಾಳ್ ಅವರ ಮಾತಿನ ಶೈಲಿಯನ್ನು ತೀವ್ರವಾಗಿ ಟೀಕಿಸಿದರು. ಆ ಯತ್ನಾಳ್ ನೋಡಿದರೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾನೆ. ಅದು ಮನುಷ್ಯನ ತರಹ ಇಲ್ಲ, ಯಾವುದೋ ಒಂದು ಕೋತಿಯ ಬ್ರೀಡ್ ಇರಬೇಕು ಎಂದು ಅತ್ಯಂತ ಕಟುವಾಗಿ ವಾಗ್ದಾಳಿ ನಡೆಸಿದರು. ಅಲ್ಲದೆ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಛಲವಾದಿ ನಾರಾಯಣಸ್ವಾಮಿ ಅವರೇ ಈ ನಾಡಿನ ದ್ವೇಷ ಭಾಷಣದ ಪಿತಾಮಹರು ಎಂದು ಪ್ರತ್ಯುತ್ತರ ನೀಡಿದರು.
ಛಲವಾದಿ ನಾರಾಯಣಸ್ವಾಮಿ ಅವರು ನೀಡಿದ ದೂರಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರದೀಪ್ ಈಶ್ವರ್, ಅವರನ್ನು ನಾನು ಪ್ರಜ್ಞಾವಂತರು ಎಂದು ಭಾವಿಸಿದ್ದೆ. ಆದರೆ ಅವರು ಯಾವುದೇ ಸತ್ಯಾಸತ್ಯತೆ ತಿಳಿಯದೆ ದೂರು ನೀಡಿದ್ದಾರೆ. ನನ್ನ ಭಾಷಣದ ವಿಡಿಯೋದಲ್ಲಿ ಅಂಧಭಕ್ತರು ಮತ್ತು ದೇಶದ್ರೋಹಿಗಳು ಈ ದೇಶಕ್ಕೆ ಮಾರಕ ಎಂದು ಹೇಳಿದ್ದೇನೆ. ನಾನು ಯಾರನ್ನೂ ವೈಯಕ್ತಿಕವಾಗಿ ದೇಶದ್ರೋಹಿ ಎಂದು ಕರೆದಿಲ್ಲ. ವಿಡಿಯೋವನ್ನು ಪೂರ್ಣವಾಗಿ ನೋಡದೆ ಹೋಮ್ ಮಿನಿಸ್ಟರ್ ಅವರಿಗೆ ಪತ್ರ ಬರೆಯುವುದು ಅವರ ಅಜ್ಞಾನವನ್ನು ತೋರಿಸುತ್ತದೆ ಎಂದು ಲೇವಡಿ ಮಾಡಿದರು.
ಒಟ್ಟಾರೆಯಾಗಿ, ಪ್ರದೀಪ್ ಈಶ್ವರ್ ಅವರ ಕೋತಿಯ ಬ್ರೀಡ್ ಎಂಬ ಹೇಳಿಕೆ ಈಗ ಬಿಜೆಪಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದು, ಮುಂಬರುವ ದಿನಗಳಲ್ಲಿ ಈ ಹೇಳಿಕೆ ಇನ್ನೂ ದೊಡ್ಡ ಮಟ್ಟದ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ. ಬಿಜೆಪಿ ನಾಯಕರು ಈ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.







