ಕುರ್ಚಿ ಖಾಲಿ ಮಾಡಬೇಕಾದೀತು : ಖಡ್ಗ ಝಳಪಿಸಿ ಸಿಎಂ ವಿರುದ್ಧ ಯತ್ನಾಳ್ ಕಿಡಿ
ಬೆಂಗಳೂರು : ನಗರದ ಅರಮನೆ ಮೈದಾನದಲ್ಲಿ ಪಂಚಮಸಾಲಿ ಸಮಾಜದ ರಣಕಹಳೆ ಮೊಳಗಿದ್ದು, ಖಡ್ಗ ಝಳಪಿಸುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿಎಂ ಬಿಎಸ್ ಯಡಿಯೂರಪ್ಪವರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಕಾರ್ಯಕ್ರಮ ಉದ್ಘಾಟನೆ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಯತ್ನಾಳ್, ನಮ್ಮ ಸರ್ಕಾರ ಇದೆ, ನಾನು ಸರ್ಕಾರದ ಶಾಸಕ. ನನಗೆ ನೋಟಿಸ್ ಕೊಟ್ಟರೆ ನನ್ನ ಬಾಯಿ ಬಂದ್ ಆಗೋದಿಲ್ಲ.
ಯತ್ನಾಳ್ ನನ್ನು ಅಂಜಿಸುತ್ತೇವೆ ಎಂದರೆ ಆದಷ್ಟು ಬೇಗ ಕುರ್ಚಿ ಖಾಲಿ ಮಾಡಬೇಕಾಗಲಿದೆ ಎಂದು ಬಿಎಸ್ ವೈ ವಿರುದ್ಧ ವಾಗ್ದಾಳಿ ಮುಂದುವರಿಸಿದರು.
ಇದೇ ವೇಳೆ ಸದನದಲ್ಲಿ ಸಿಎಂ ಹೇಳಿಕೆಯನ್ನು ಉಲ್ಲೇಖಿಸಿ ಅವರ ವಿರುದ್ಧ ಕೆಂಡಕಾರಿದ ಯತ್ನಾಳ್, ಮೀಸಲಾತಿ ಬಗ್ಗೆ ಸದನದಲ್ಲಿ ದನಿ ಎತ್ತಿದರೆ ನನಗೆ 25 ಸಂಸದರನ್ನು ಕರೆದುಕೊಂಡು ದೆಹಲಿಗೆ ಹೋಗಿ ಅಂತಾರೆ.
ನಾನೇಕೆ ಹೋಗಲಿ, ನಿಮ್ಮ ಕಡೆ ಚಾವಿ ಇಟ್ಟುಕೊಂಡು ಮತ್ತೊಬ್ಬರ ಕಡೆ ಕೈ ತೋರಿಸಿದರೆ ನಾವೇಕೆ ಹೋಗಬೇಕು. ನಾವು ವಿಧಾನಸೌಧದ ಮೂರನೇ ಮಹಡಿಯಲ್ಲಿ ಇಲ್ಲ.
ಸ್ವಲ್ಪ ದಿನದಲ್ಲಿ ಅಲ್ಲಿಗೆ ಹೋಗುತ್ತೇವೆ. ಎಲ್ಲರಿಗೂ ಒಂದು ಕಾಲ ಬರಲಿದೆ. 2ಎ ಕೊಡುತ್ತೇವೆ ಅಂತಾ ಯಾಕೆ ಹೇಳಿದ್ರಿ. ನಾಟಕ ಕಂಪನಿ ಬಂದ್ ಮಾಡಿ, ನಿಮ್ಮ ನಾಟಕ ಕಂಪನಿ ನನಗೆ ಗೊತ್ತಿದೆ. ನೋಟಿಸ್ ಕೊಟ್ಟರೆ ಅಂಜುತ್ತೇನಾ ಎಂದು ಗುಡುಗಿದರು.
