ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಮತ್ತು ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರೆಂದೇ ಬಿಂಬಿತರಾಗಿರುವ ಬಿ.ಎಸ್. ಯಡಿಯೂರಪ್ಪ ಅವರು ಮೂಲತಃ ಲಿಂಗಾಯತರೇ ಅಲ್ಲ ಎಂಬ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಸ್ಫೋಟಕ ಹೇಳಿಕೆಯು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ಈ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರ ಪುತ್ರ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ದಾಖಲೆ ಸಮೇತ ಉತ್ತರ ನೀಡಿ, ಸಮುದಾಯದಲ್ಲಿ ಸೃಷ್ಟಿಯಾಗಿರುವ ಗೊಂದಲವನ್ನು ನಿವಾರಿಸಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ನೇರ ಸವಾಲು ಹಾಕಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ಈ ವಿಷಯವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿ ಯಡಿಯೂರಪ್ಪ ಕುಟುಂಬವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಯತ್ನಾಳ್ ಹೇಳಿಕೆಯ ಕಿಡಿ
ಕೆಲ ದಿನಗಳ ಹಿಂದೆ ಖಾಸಗಿ ಕಾರ್ಯಕ್ರಮವೊಂದಕ್ಕೆ ಶಿವಮೊಗ್ಗಕ್ಕೆ ಆಗಮಿಸಿದ್ದ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾಗಿ ಆಯನೂರು ಮಂಜುನಾಥ್ ಬಹಿರಂಗಪಡಿಸಿದರು. “ಆ ಸಂದರ್ಭದಲ್ಲಿ ಯತ್ನಾಳ್ ಅವರು, ‘ಬಿ.ಎಸ್. ಯಡಿಯೂರಪ್ಪನವರು ನಿಜವಾಗಿಯೂ ಲಿಂಗಾಯತರೇ ಅಲ್ಲ, ಈ ಕುರಿತು ನನ್ನ ಬಳಿ ಅಧಿಕೃತ ದಾಖಲೆಗಳಿವೆ’ ಎಂದು ಸ್ಪಷ್ಟವಾಗಿ ಹೇಳಿದರು. ಕಳೆದ 30 ವರ್ಷಗಳಿಂದ ಯಡಿಯೂರಪ್ಪನವರನ್ನು ಲಿಂಗಾಯತ ನಾಯಕರೆಂದೇ ನೋಡಿಕೊಂಡು ಬಂದ ನನಗೆ ಈ ಮಾತು ತೀವ್ರ ಆಘಾತ ಮತ್ತು ಆಶ್ಚರ್ಯವನ್ನುಂಟುಮಾಡಿತು. ನನ್ನಂತಹ ರಾಜಕೀಯ ನಾಯಕನ ತಲೆಯಲ್ಲೇ ಈ ಪ್ರಶ್ನೆ ಹುಟ್ಟಿಕೊಂಡರೆ, ಇನ್ನು ಸಾಮಾನ್ಯ ಲಿಂಗಾಯತ ಸಮುದಾಯದ ಜನರಲ್ಲಿ ಎಂತಹ ಗೊಂದಲ ಸೃಷ್ಟಿಯಾಗಬಹುದು?” ಎಂದು ಅವರು ಪ್ರಶ್ನಿಸಿದರು.
ರಾಘವೇಂದ್ರಗೆ ನೇರ ಸವಾಲು: ಸೇತುವೆ, ಟವರ್ ಬಿಟ್ಟು ಜಾತಿ ಬಗ್ಗೆ ಮಾತನಾಡಿ
ಯತ್ನಾಳ್ ಅವರ ಗಂಭೀರ ಆರೋಪದ ಬಗ್ಗೆ ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ದೇಶಕರೂ ಆಗಿರುವ ಸಂಸದ ಬಿ.ವೈ. ರಾಘವೇಂದ್ರ ಅವರು ಮೌನ ವಹಿಸಿರುವುದನ್ನು ಆಯನೂರು ಬಲವಾಗಿ ಆಕ್ಷೇಪಿಸಿದರು. “ನಾವು ಬಿಎಸ್‌ವೈ ಕುಟುಂಬವನ್ನು ವೀರಶೈವ ಲಿಂಗಾಯತರೆಂದು ನಂಬಿದ್ದೇವೆ, ಈ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ. ಆದರೆ, ಯತ್ನಾಳ್ ಅವರಂತಹ ಹಿರಿಯ ನಾಯಕರು ಸಾರ್ವಜನಿಕವಾಗಿ ಪ್ರಶ್ನೆ ಎತ್ತಿದಾಗ, ಅದಕ್ಕೆ ಉತ್ತರ ಕೊಡುವ ಜವಾಬ್ದಾರಿ ರಾಘವೇಂದ್ರ ಅವರ ಮೇಲಿದೆ. ಅವರು ಕೇವಲ ಸೇತುವೆ, ಬ್ರಿಡ್ಜ್, ಟವರ್ ನಿರ್ಮಾಣದ ಬಗ್ಗೆ ಮಾತನಾಡುವುದನ್ನು ಬಿಟ್ಟು, ತಮ್ಮ ಕುಟುಂಬದ ಜಾತಿಯ ಬಗ್ಗೆ ದಾಖಲೆ ಸಹಿತ ಸ್ಪಷ್ಟನೆ ನೀಡಿ ಜನರ ಮನಸ್ಸಿನಲ್ಲಿರುವ ಗೊಂದಲವನ್ನು ಮೊದಲು ಬಗೆಹರಿಸಲಿ,” ಎಂದು ಅವರು ಟೀಕಿಸಿದರು.
ಜಾತಿ ಗಣತಿ ಗೊಂದಲ: ನಿಮ್ಮದು ಹಿಂದೂವೋ? ವೀರಶೈವ ಲಿಂಗಾಯತವೋ?
ಜಾತಿ ಸಮೀಕ್ಷೆಯ ವಿಚಾರದಲ್ಲಿ ಯಡಿಯೂರಪ್ಪ ಕುಟುಂಬದ ದ್ವಂದ್ವ ನಿಲುವನ್ನು ಆಯನೂರು ಮಂಜುನಾಥ್ ತರಾಟೆಗೆ ತೆಗೆದುಕೊಂಡರು. “ದಾವಣಗೆರೆಯಲ್ಲಿ ನಡೆದ ವೀರಶೈವ ಮಹಾಸಭಾದ ಸಭೆಯಲ್ಲಿ ಭಾಗವಹಿಸಿದ್ದ ರಾಘವೇಂದ್ರ ಅವರು, ಜಾತಿ ಸಮೀಕ್ಷೆಯ ಇತರೆ ಕಾಲಂನಲ್ಲಿ ‘ಲಿಂಗಾಯತ’ ಎಂದು ನಮೂದಿಸಬೇಕು ಎಂಬ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದ್ದರು. ಆದರೆ, ಈಗ ಅವರ ಸಹೋದರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಎಲ್ಲರೂ ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಬರೆಸಬೇಕು ಎನ್ನುತ್ತಾರೆ. ಹಾಗಾದರೆ, ನಿಮ್ಮ ಅಧಿಕೃತ ನಿಲುವು ಯಾವುದು? ವೀರಶೈವ ಮಹಾಸಭಾದಲ್ಲಿದ್ದಾಗ ಒಂದು, ಬಿಜೆಪಿಯಲ್ಲಿದ್ದಾಗ ಇನ್ನೊಂದು ನಿಲುವು ತಾಳುವುದು ಸರಿಯಲ್ಲ. ಧರ್ಮದ ಕಾಲಂನಲ್ಲಿ ನೀವು ವೀರಶೈವ ಲಿಂಗಾಯತ ಎಂದು ಬರೆಸುತ್ತೀರೋ ಅಥವಾ ಹಿಂದೂ ಎಂದು ಬರೆಸುತ್ತೀರೋ ಎಂಬುದನ್ನು ಸ್ಪಷ್ಟಪಡಿಸಿ,” ಎಂದು ಆಗ್ರಹಿಸಿದರು.
ವಿಜಯೇಂದ್ರ-ರಾಘವೇಂದ್ರ ಕೋಟಾ ಯಾವುದು?
ಮಧು ಬಂಗಾರಪ್ಪ ಅವರನ್ನು ಜಾತಿ ಕೋಟಾದ ಮೇಲೆ ಸಚಿವರನ್ನಾಗಿ ಮಾಡಲಾಗಿದೆ ಎಂಬ ಸಂಸದ ರಾಘವೇಂದ್ರ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಆಯನೂರು, “ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ, ಸಂಘಟನೆಯಲ್ಲಿ ತೊಡಗಿಸಿಕೊಳ್ಳದ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಯಾವ ಕೋಟಾದ ಅಡಿಯಲ್ಲಿ? ಕೇವಲ ಪುರಸಭೆ ಸದಸ್ಯರಾಗಿದ್ದ ನಿಮಗೆ (ರಾಘವೇಂದ್ರ) ಲೋಕಸಭಾ ಟಿಕೆಟ್ ನೀಡಿದ್ದು ಯಾವ ಕೋಟಾ? ಮಧು ಬಂಗಾರಪ್ಪ ಅವರನ್ನು ಅವರ ಪರಿಶ್ರಮವನ್ನು ಗುರುತಿಸಿ ಸಚಿವರನ್ನಾಗಿ ಮಾಡಲಾಗಿದೆ. ಬೇರೆಯವರ ಕೋಟಾದ ಬಗ್ಗೆ ಮಾತನಾಡುವ ಮುನ್ನ, ನಿಮ್ಮಿಬ್ಬರ ರಾಜಕೀಯ ಪ್ರವೇಶ ಯಾವ ಕೋಟಾದಿಂದ ಆಗಿದೆ ಎಂಬುದನ್ನು ಮೊದಲು ಬಹಿರಂಗಪಡಿಸಿ,” ಎಂದು ಸವಾಲು ಹಾಕಿದರು.
ಈ ಸುದ್ದಿಗೋಷ್ಠಿಯು ರಾಜ್ಯ ರಾಜಕೀಯದಲ್ಲಿ, ಅದರಲ್ಲೂ ವಿಶೇಷವಾಗಿ ಬಿಜೆಪಿ ಮತ್ತು ಲಿಂಗಾಯತ ಸಮುದಾಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸ ಒದಗಿಸಿದ್ದು, ಯಡಿಯೂರಪ್ಪ ಕುಟುಂಬದಿಂದ ಬರಬಹುದಾದ ಪ್ರತಿಕ್ರಿಯೆಯನ್ನು ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.








