ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಳೆದೊಂದು ವಾರದಿಂದ ಮಳೆರಾಯನ ಅಟ್ಟಹಾಸ ಮುಂದುವರೆದಿದ್ದು, ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.
ಅಲ್ಲದೇ, ಮಳೆರಾಯನ ಆರ್ಭಟ ಇನ್ನೂ ಮುಂದುವರೆಯಲಿದ್ದು, ಬೆಂಗಳೂರಿಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವರುಣನ ಆರ್ಭಟ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಸೂಚಿಸಿದೆ. ಹೀಗಾಗಿ ಬುಧವಾರ ಬೆಂಗಳೂರಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಬುಧವಾರ, ಗುರುವಾರ ಎರಡು ದಿನ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಇಂದು ಕೂಡ ನಗರದ ಪ್ರಾಥಮಿಕ, ಫ್ರೌಡಶಾಲೆ, ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಿ ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್ ಆದೇಶ ಹೊರಡಿಸಿದ್ದಾರೆ. ವ್ಯಾಪಕ ಮಳೆಯಿಂದಾಗಿ ಹಲವಾರು ಕಂಪನಿಗಳು ತಮ್ಮ ಕೆಲಸಗಾರರಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ನೀಡಿವೆ.
ಇನ್ನೊಂದೆಡೆ ಕಾರವಾಳಿ ಜಿಲ್ಲೆಗಳಲ್ಲೂ ಮಳೆಯ ಆರ್ಭಟ ಹೆಚ್ಚಾಗಿದೆ. ಹೀಗಾಗಿ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ರಾಜ್ಯದ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಹಾವೇರಿ, ಮೈಸೂರು, ಮಂಡ್ಯ, ರಾಮನಗರ, ಹಾಸನ, ಕೊಡಗು ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.