ಸೋಂಕಿತ ತಾಯಿ ಮುಖ ನೋಡಲು ಬಿಟ್ಟಿಲ್ಲ ಎಂದು ಯುವಕ ಆತ್ಮಹತ್ಯೆಗೆ ಯತ್ನ
ಕಲಬುರಗಿ : ಕೊರೊನಾ ಸೋಂಕಿತ ತಾಯಿಯ ಮುಖ ನೋಡಲು ಬಿಟ್ಟಿಲ್ಲ ಎಂದು ಮನನೊಂದು ಯುವಕನೊರ್ವ ಆಸ್ಪತ್ರೆ ಕಟ್ಟಡದ ಮೇಲಿಂದ ಆತ್ಮಹತ್ಯೆ ಯತ್ನಿಸಿರುವ ಘಟನೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಕೊರೊನಾ ಸೋಂಕು ಹಿನ್ನೆಲೆ ಯುವಕನ ತಾಯಿಗೆ ಕಳೆದ 12 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ತಾಯಿ ಆರೋಗ್ಯ ಸ್ಥಿತಿ ಬಗ್ಗೆ ಸರಿಯಾದ ಮಾಹಿತಿ ಸಿಗದ ಹಿನ್ನಲೆ ಖಿನ್ನತೆಗೆ ಒಳಗಾದ ಯುವಕ ಇಂದು ಬೆಳಿಗ್ಗೆ ಆಸ್ಪತ್ರೆಯ ಕಟ್ಟಡದ ಮೇಲೇರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ.
ಇದರಿಂದ ಗಾಬರಿಗೊಂಡ ಆಸ್ಪತ್ರೆಯ ಸಿಬ್ಬಂದಿ ತಾಯಿಯ ಮುಖ ನೋಡಲು ಬಿಡುವ ಭರವಸೆ ನೀಡಿದ ಬಳಿಕ ಆಸ್ಪತ್ರೆ ಕಟ್ಟಡದಿಂದ ಕೆಳಗಿಳಿದಿದ್ದಾನೆ.
ನಿನ್ನೆ ಆಸ್ಪತ್ರೆ ಸಿಬ್ಬಂದಿ ಯುವಕನಿಗೆ ಇಂದು ತನ್ನ ತಾಯಿಯ ಮುಖ ತೋರಿಸುವುದಾಗಿ ಭರವಸೆ ನೀಡಿದ್ದರಂತೆ.
ಅದನ್ನೇ ನಂಬಿಕೊಂಡು ಯುವಕ ಇಂದು ಆಸ್ಪತ್ರೆಗೆ ಬಂದಾಗ ಸಿಬ್ಬಂದಿ ಉಲ್ಟಾ ಹೊಡೆದಿದ್ದಾರೆ. ಈ ಹಿನ್ನೆಲೆ ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಸ್ಪತ್ರೆ ಮೇಲೇರಿದ್ದಾನೆ.