ಕಿಡಿಗೇಡಿಗಳಿಂದ ಮೊಟ್ಟೆ ದಾಳಿ | ಧರ್ಮದೇಟು ನೀಡಿದ ಸಾರ್ವಜನಿಕರು
ಭಟ್ಕಳ : ಕಿಡಿಗೇಡಿಗಳ ಯುವಕರ ಗುಂಪೊಂದು ಬೈಕ್ ಮೇಲೆ ಬಂದು ಪಾದಾಚಾರಿಗಳ ಮೇಲೆ ಮೊಟ್ಟೆಯಿಂದ ಹಲ್ಲೆ ಮಾಡಿ ವಿಕೃತಿ ಮೆರೆದಿರುವ ಘಟನೆ ಭಟ್ಕಳದ ಮಣ್ಕುಳಿಯ ರಾಘವೇಂದ್ರಸ್ವಾಮಿ ಮಠದ ಬಳಿ ನಡೆದಿದೆ.
ಭಟ್ಕಳ್ ತಾಲೂಕಿನ ಹೆಬಳೆ ಗಾಂಧಿನಗರ, ಹನುಮಾನ್ ನಗರ ಹಾಗೂ ಪುರವರ್ಗದಲ್ಲಿ ಘಟನೆ ನಡೆದಿದೆ. ಮೊದಲು ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಂಧಿನಗರದಲ್ಲಿ ಮೂರು ಬೈಕ್ ಮೇಲೆ ಬಂದು ಪಾದಾಚಾರಿಗಳ ಮೇಲೆ ಮೊಟ್ಟೆ ಎಸೆದು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ನಂತರ ಇದೇ ಕಿಡಗೇಡಿಗಳು ಹನುಮಾನ್ ನಗರದಲ್ಲಿ ಊಟದ ಬಳಿಕ ರಾತ್ರಿ ವಾಕಿಂಗ್ ಮಾಡುತ್ತಿದ್ದ ಓರ್ವರ ಎದೆಯ ಭಾಗಕ್ಕೆ ಯಾವುದೋ ವಸ್ತುವಿನಿಂದ ಹಲ್ಲೆ ಮಾಡಿದ್ದಾರೆ. ಹಾಗೇ ಪುರವರ್ಗದಲ್ಲಿ ಮನೆ ಪಕ್ಕದಲ್ಲಿರುವ ಬೇಕರಿಗೆ ಹೋಗಿ ಬರುತ್ತಿದ್ದ, ಯುವಕನ ಮೇಲೆ ಮೊಟ್ಟೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಗಮನಿಸಿದ ಹಲ್ಲೆಗೊಳಗಾದ ಯುವಕನ ಸಹೋದರ ತಕ್ಷಣಕ್ಕೆ ತನ್ನ ಕಾರನ್ನು ತೆಗೆದುಕೊಂಡು ಮೂರು ಬೈಕ್ನ್ನು ಹಿಂಬಾಲಿಸಿದ್ದಾರೆ. ನಂತರ ಮಣ್ಕುಳಿಯ ರಾಘವೇಂದ್ರಸ್ವಾಮಿ ಮಠದ ಸಮೀಪ ಇಬ್ಬರು ಯುವಕರನ್ನು ಹಿಂಬಾಲಿಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸಾರ್ವಜನಿಕರು ಜಮಾಯಿಸುವಷ್ಟರಲ್ಲಿ ಓರ್ವ ಯುವಕ ತಪ್ಪಿಸಿಕೊಂಡು ಪರಾರಿಯಾಗಿದ್ದು, ಸಿಕ್ಕಿಬಿದ್ದ ಇನ್ನೋರ್ವ ಯುವಕನಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ್ದಾರೆ.
ನಂತರ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿ ಪೊಲೀಸರು ಸಾರ್ವಜನಿಕರನ್ನು ಸಮಾಧಾನಪಡಿಸಿ ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಉಳಿದೆಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಸಾರ್ವಜನಿಕರು ಪೊಲೀಸ್ ಠಾಣೆಯ ಬಳಿ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಬಳಿಕ ಸ್ಥಳಕ್ಕೆ ಕೆಎಸ್ಆರ್ಪಿ ತುಕಡಿ ನಿಯೋಜಿಸಿ ಆಕ್ರೋಶಗೊಂಡ ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ತಾಲೂಕಿನಾದ್ಯಂತ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಡಿವೈಎಸ್‌ಪಿ ಬೆಳ್ಳಿಯಪ್ಪ ತಿಳಿಸಿದ್ದಾರೆ.








