• ಯುವದಸರಾ ಪ್ರಯುಕ್ತ ವಿಶೇಷ ಗೊಂಬೆಯಾಟ
• ಮಹಾಭಾರತ ಕಥನದಲ್ಲಿ ಬಾಲಿಯ ಕಲೆ
• ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಉಷಾ ಜೆ ಪವಾರ್ ಉಪಸ್ಥಿತಿ
ಬೆಂಗಳೂರು : ದಸರಾ ಮಹೋತ್ಸವದ ಅಂಗವಾಗಿ ನಗರದ ಜಯನಗರದ ‘ಯುವಕ ಸಂಘ’ದಲ್ಲಿ ಅಕ್ಟೋಬರ್ 15ರಂದು ‘ಯುವದಸರಾ’ ಪ್ರಯುಕ್ತ ಇಂಡೋನೇಷ್ಯಾದ ಸಾಂಪ್ರದಾಯಿಕ ಶ್ಯಾಡೋ ಪಪೆಟ್ರಿ (ತೊಗಲುಗೊಂಬೆಯಾಟ) ಪ್ರದರ್ಶನ ಆಯೋಜನೆಗೊಂಡಿದೆ. ‘ಪರಮ್ ಫೌಂಡೇಷನ್’ ನಡೆಸುತ್ತಿರುವ ‘ಬಾಲಿ ಇನ್ ಬೆಂಗಳೂರು’ ಸಾಂಸ್ಕೃತಿಕ ಉತ್ಸವದ ಭಾಗವಾಗಿ ಈ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಕುಶಲಕರ್ಮಿ ಹಾಗೂ ಕಸೂತಿ ಕಲಾ ತಜ್ಞೆ ಉಷಾ ಜೆ. ಪವಾರ್ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇಂಡೋನೇಷ್ಯಾದಲ್ಲಿ ‘ವಾಯಾಂಗ್ ಕುಲಿತ್’ (Wayang Kulit) ಎಂದೇ ಪ್ರಸಿದ್ಧವಾಗಿರುವ ಈ ಕಲಾ ಪ್ರಕಾರದಲ್ಲಿ ಬೊಂಬೆಗಳು ಹಾಗೂ ಬೆಳಕು-ನೆರಳಿನ ಸಂಯೋಜನೆಯಲ್ಲಿ ಮಹಾಭಾರತದ ಪೌರಾಣಿಕ ಕಥೆಗಳು ರಂಗದ ಮೇಲೆ ಜೀವಪಡೆಯಲಿವೆ. ಪದ್ಮಶ್ರೀ ಪುರಸ್ಕೃತ ಡಾ. ಐ. ವಯಾನ್ ದಿಬಿಯಾ ನೇತೃತ್ವದ ಕಲಾವಿದರ ತಂಡದಲ್ಲಿದ್ದು, ಪ್ರಸಿದ್ಧ ಗೊಂಬೆಯಾಟಗಾರ ಇಡಾ ವಯಾನ್ ಪಾನ್ಸುವಾ ಧರ್ಮ ಅವರು ಈ ಪ್ರದರ್ಶನ ನೀಡಲಿದ್ದಾರೆ.








