ಜಿಮ್ಮಿ ಸಾಧನೆಗೆ ಯುವಿ ಸಲಾಂ.. ಜಸ್ಪ್ರಿತ್ ಬೂಮ್ರಾಗೆ ಟಾರ್ಗೆಟ್ ಫಿಕ್ಸ್ ಮಾಡಿದ್ದ ಸಿಕ್ಸರ್ ಕಿಂಗ್…!
ಯುವ ವೇಗಿಗಳನ್ನು ನಾಚಿಸುವಂತೆ ಬೌಲಿಂಗ್ ಮಾಡುತ್ತಿರುವ ಇಂಗ್ಲೆಂಡ್ ನ ಜೇಮ್ಸ್ ಆಂಡರ್ಸನ್ ವಿಶ್ವ ಕ್ರಿಕೆಟ್ ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿಶ್ವ ಟೆಸ್ಟ್ ಕ್ರಿಕೆಟ್ ನಲ್ಲಿ 600 ವಿಕೆಟ್ ಪಡೆದ ಮೊದಲ ವೇಗಿ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.
ಜೇಮ್ಸ್ ಆಂಡರ್ಸನ್ ಅವರ ಈ ಸಾಧನೆಗೆ ವಿಶ್ವದ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಅಭಿನಂದನೆ ಸಲ್ಲಿಸಿದ್ದಾರೆ. ಅದ್ರಲ್ಲೂ ಮೆಕ್ ಗ್ರಾಥ್ ಅವರು ಜೇಮ್ಸ್ ಆಂಡರ್ಸನ್ ಸಾಧನೆಯನ್ನು ಸಚಿನ್ ತೆಂಡುಲ್ಕರ್ ಗೆ ಹೋಲಿಕೆ ಮಾಡಿದ್ದಾರೆ.
38ರ ಹರೆಯದ ಜೇಮ್ಸ್ ಆಂಡರ್ಸನ್ ತನ್ನ ವೇಗದ ಬೌಲಿಂಗ್ ಜೊತೆ ಸ್ವಿಂಗ್ ಎಸೆತಗಳ ಮೂಲಕವೂ ಎದುರಾಳಿ ಬ್ಯಾಟ್ಸ್ ಮೆನ್ ಗಳನ್ನು ದಂಗುಬಡಿಸುತ್ತಿದ್ದಾರೆ. ಅತಿರಥ ಮಹಾರಥ ಬ್ಯಾಟ್ಸ್ ಮೆನ್ ಗಳಿಗೂ ಕಂಟಕವಾಗಿ ಕಾಡುತ್ತಿರುವ ಜಿಮ್ಮಿ ಇನ್ನೂ ತನ್ನ ನಿವೃತ್ತಿಯ ಬಗ್ಗೆ ಮಾತನಾಡಿಲ್ಲ. ಬದಲಾಗಿ 700 ವಿಕೆಟ್ ಪಡೆಯುವ ಟಾರ್ಗೆಟ್ ಅನ್ನು ಹೊಂದಿದ್ದಾರೆ.
ಈ ನಡುವೆ ಜಿಮ್ಮಿ ಸಾಧನೆಗೆ ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಬೌಲರ್ ಜಸ್ಪ್ರಿತ್ ಬೂಮ್ರಾ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಅಭಿನಂದನೆಗಳು ಜಿಮ್ಮಿ… ನಿಮ್ಮ ಸಾಧನೆ ಅಮೋಘವಾದದ್ದು.. ಆಲ್ ದಿ ಬೆಸ್ಟ್ ಅಂತ ಜಸ್ಪ್ರಿತ್ ಬೂಮ್ರಾ ಅವರು ಟ್ವಿಟ್ ಮಾಡಿದ್ದಾರೆ.
ಆದ್ರೆ ಜಸ್ಪ್ರಿತ್ ಬೂಮ್ರಾ ಅವರ ಈ ಟ್ವಿಟ್ ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ತನ್ನದೇ ಆದ ಸ್ಟೈಲ್ ನಲ್ಲಿ ಟ್ವಿಟ್ ಮಾಡಿದ್ದಾರೆ. ಅಲ್ಲದೆ ಜಸ್ಪ್ರಿತ್ ಬೂಮ್ರಾಗೆ ಟಾರ್ಗೆಟ್ ಕೂಡ ನೀಡಿದ್ದಾರೆ. ನಿನ್ನ ಟಾರ್ಗೆಟ್ 400 ಅಂತ ಹೇಳುವ ಮೂಲಕ ಜಸ್ಪ್ರಿತ್ ಬೂಮ್ರಾಗೆ ಪ್ರೇರಣೆ ನೀಡಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ನೀನು ಕನಿಷ್ಠವಾದ್ರೂ 400 ವಿಕೆಟ್ ಪಡೆಯಬೇಕು ಎಂದು ಯುವಿ ಬೂಮ್ರಾಗೆ ಹೇಳಿದ್ದಾರೆ.
27ರ ಹರೆಯದ ಜಸ್ಪ್ರಿತ್ ಬೂಮ್ರಾ ಅವರು ಟೀಮ್ ಇಂಡಿಯಾದ ಪ್ರಮುಖ ಬೌಲರ್. ಟೆಸ್ಟ್, ಏಕದಿನ ಮತ್ತು ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಅದ್ಭುತವಾದ ಸಾಧನೆಯನ್ನು ಮಾಡುತ್ತಿದ್ದಾರೆ. ಎದುರಾಳಿ ತಂಡಗಳಿಗೆ ಬೂಮ್ರಾ ಅವರ ಎಸೆತಗಳು ಶಾಕ್ ನೀಡುತ್ತವೆ.
2018ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಎಂಟ್ರಿಕೊಟ್ಟಿರುವ ಬೂಮ್ರಾ ಇಲ್ಲಿಯವರೆಗೆ 14 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದ್ರಲ್ಲಿ 68 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಅಲ್ಲದೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಐದು ವಿಕೆಟ್ ಗಳನ್ನು ಉರುಳಿಸಿದ್ದಾರೆ.
ಇನ್ನು ಯುವರಾಜ್ ಸಿಂಗ್ ಅವರು ಜೇಮ್ಸ್ ಆಂಡರ್ಸನ್ ಸಾಧನೆಗೂ ಸಲಾಂ ಅಂದಿದ್ದಾರೆ. ನನ್ನ ಬದುಕಿನಲ್ಲಿ ವೇಗದ ಬೌಲರ್ 600 ವಿಕೆಟ್ ಪಡೆಯುತ್ತಾರೆ ಅಂತ ಊಹೆ ಕೂಡ ಮಾಡಿರಲಿಲ್ಲ. ಇದು ಕೇವಲ ಕ್ವಾಂಟಿಟಿ ಮಾತ್ರವಲ್ಲ. ಕ್ವಾಲೀಟಿ ಕೂಡ ಹೌದು. ಸರ್… ಜಿಮ್ಮಿ ನೀವು ಗ್ರೇಟೆಸ್ಟ್ ಆಲ್ ಟೈಮ್ ಗ್ರೇಟ್ ಅಂತ ಬಣ್ಣಿಸಿದ್ದಾರೆ.