ಚೆನ್ನೈ ಮೂಲದ ಯುವತಿ ಅಪಹರಣಕ್ಕೆ ಸಂಬಂಧಿಸಿದ ಆರೋಪಿಗಳ ಪಟ್ಟಿಯಲ್ಲಿ ಝಕೀರ್ ನಾಯ್ಕ್ ಹೆಸರು
ಚೆನ್ನೈ, ಅಗಸ್ಟ್ 27: ಬಾಂಗ್ಲಾದೇಶದ ಪ್ರಜೆಗಳು ಲಂಡನ್‌ನಲ್ಲಿ ಚೆನ್ನೈ ಮೂಲದ ಯುವತಿಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಎಫ್‌ಐಆರ್ ದಾಖಲಿಸಿದೆ.

ಲಂಡನ್‌ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ತನ್ನ ಮಗಳನ್ನು ಬಾಂಗ್ಲಾದೇಶದ ಪ್ರಜೆಗಳು ಅಪಹರಿಸಿದ್ದಾರೆ ಎಂದು ಆರೋಪಿಸಿರುವ ಚೆನ್ನೈ ಮೂಲದ ಉದ್ಯಮಿಯೊಬ್ಬರ ದೂರಿನ ಮೇರೆಗೆ ಈ ವರ್ಷದ ಮೇ ತಿಂಗಳಲ್ಲಿ ಚೆನ್ನೈ ಅಪರಾಧ ಶಾಖೆಯಿಂದ ಈ ಪ್ರಕರಣವನ್ನು ದಾಖಲಿಸಲಾಗಿತ್ತು. ಕೇಂದ್ರ ಗೃಹ ಸಚಿವಾಲಯದ ಆದೇಶದ ನಂತರ ಈ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲಾಯಿತು.
ಅವಳನ್ನು ತೀವ್ರಗಾಮಿತ್ವದ ಕಡೆ ವಾಲುವಂತೆ ಮತ್ತು ಇಸ್ಲಾಂಗೆ ಮತಾಂತರಗೊಳ್ಳಲು ಒತ್ತಾಯಿಸಲಾಗಿದೆ ಎಂದು ಆಕೆಯ ತಂದೆ ಆರೋಪಿಸಿದ್ದಾರೆ. ಬಾಂಗ್ಲಾದೇಶದ ಮಾಜಿ ಸಂಸದ ಸರ್ದಾರ್ ಶಖಾವತ್ ಹುಸೇನ್ ಬೊಕುಲ್ ಅವರ ಪುತ್ರ ನಫೀಸ್ ಅವರನ್ನು ಎಫ್‌ಐಆರ್‌ನಲ್ಲಿ ಆರೋಪಿ ಎಂದು ಹೆಸರಿಸಲಾಗಿದೆ. ನಫೀಸ್ ಬಾಲಕಿಯೊಂದಿಗೆ ಸ್ನೇಹ ಬೆಳೆಸಿ ಅಪಹರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ವಿವಾದಾತ್ಮಕ ಇಸ್ಲಾಮಿಕ್ ವಿದ್ವಾಂಸ ಝಕೀರ್ ನಾಯ್ಕ್ ನನ್ನೂ ಈ ಪ್ರಕರಣದ ಆರೋಪಿ ಎಂದು ಹೆಸರಿಸಲಾಗಿದೆ.

ಅಪಹರಣದಲ್ಲಿ ನಾಯ್ಕ್ ಜೊತೆ ಸಂಪರ್ಕ ಹೊಂದಿರಬಹುದೆಂದು ಶಂಕಿಸಲಾಗಿರುವ ಸಂಘಟಿತ ಬಾಂಗ್ಲಾದೇಶದ ಗುಂಪಿನ ಯಾವುದೇ ಪಾತ್ರವಿದೆಯೇ ಎಂದು ಎನ್ಐಎ ತನಿಖೆ ನಡೆಸುತ್ತಿದೆ.
ಪಿತೂರಿ, ಕ್ರಿಮಿನಲ್ ಬೆದರಿಕೆ, ಅಪಹರಣ, ಕಳ್ಳಸಾಗಣೆ ಮತ್ತು ಲೈಂಗಿಕ ಶೋಷಣೆಯ ಜೊತೆಗೆ ಸುಲಿಗೆ ಪ್ರಯತ್ನ, ಮತ್ತು ಮಾರಣಾಂತಿಕ ಬೆದರಿಕೆಗಳು ಸೇರಿದಂತೆ ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.








