ಮಹಾರಾಷ್ಟ್ರದ ಪುಣೆಯಲ್ಲಿ ಝಿಕಾ ವೈರಸ್ ನ ಆತಂಕ ಹೆಚ್ಚಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಹೀಗಾಗಿ ಜನರು ಭಯಭೀತರಾಗಿದ್ದಾರೆ.
ಜೂನ್ ನಿಂದ ಇಲ್ಲಿಯವವರೆಗೆ 66 ಝಿಕಾ ವೈರಸ್ ನ ಪ್ರಕರಣಗಳು ದೃಢಪಟ್ಟಿದ್ದು, ಅವುಗಳಲ್ಲಿ 26 ಜನ ಗರ್ಭಣಿಯರಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ವೈರಸ್ ಗೆ ಬಲಿಯಾಗಿರುವವರನ್ನು 68 ರಿಂದ 78ರ ಆಸುಪಾಸಿನವರು ಎಂದು ಗುರುತಿಸಲಾಗಿದೆ. ಆದರೆ, ಇವರ ಸಾವಿಗೆ ಝಿಕಾ ವೈರಸ್ ಮಾತ್ರ ಕಾರಣವಲ್ಲ. ಹಲವು ಆರೋಗ್ಯ ಸಮಸ್ಯೆಗಳು ಮೊದಲೇ ಇದ್ದವು. ಈ ಮದ್ಯೆ ಝಿಕಾ ವೈರಸ್ ಕಾಣಿಸಿಕೊಂಡಿದೆ. ಈ ಎಲ್ಲ ಕಾರಣಗಳಿಂದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಸೋಂಕಿತರಲ್ಲಿ 26 ಜನ ಗರ್ಭಿಣಿಯರರಿರುವ ಕಾರಣ ಸೂಕ್ಷ್ಮವಾಗಿ ಅವರ ಮೇಲೆ ಗಮನ ಹರಿಸಲಾಗಿದೆ. ಹೆಚ್ಚಿನವರ ಆರೋಗ್ಯ ಉತ್ತಮವಾಗಿದೆ. ಪುಣೆಯಲ್ಲಿ ಜುಲೈ 1 ರಂದು ಝಿಕಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಎರಂಡ್ವಾನೆಯಲ್ಲಿ ವಾಸಿಸುತ್ತಿರುವ ಇಬ್ಬರು ಗರ್ಭಿಣಿಯರಿಗೆ ಸೋಂಕು ತಗುಲಿದೆ.
ವೈರಸ್ ಅನ್ನು ಮೊದಲು 1947 ರಲ್ಲಿ ಉಗಾಂಡಾದಲ್ಲಿ ಗುರುತಿಸಲಾಯಿತು. ಝಿಕಾ ವೈರಸ್ ಸೋಂಕು ಸೊಳ್ಳೆಯಿಂದ ಹರಡುವ ವೈರಲ್ ಸೋಂಕಾಗಿದೆ. ಇದು ಗಂಭೀರ ರೋಗ ಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಕೆಲವು ರೋಗಿಗಳು ಜ್ವರ, ಕೀಲು ನೋವು, ದೇಹದ ನೋವು, ತಲೆನೋವು, ಕೆಂಪು ಕಣ್ಣುಗಳು, ವಾಂತಿ, ಅಸ್ವಸ್ಥತೆ, ಜ್ವರ ಮತ್ತು ದೇಹದ ದದ್ದುಗಳನ್ನು ಅನುಭವಿಸುತ್ತಾರೆ.
ಗರ್ಭಿಣಿಯರಲ್ಲಿ ಝಿಕಾ ವೈರಸ್ ಮೈಕ್ರೊಸೆಫಾಲಿಯನ್ನು ಉಂಟು ಮಾಡುವ ಸಾಧ್ಯತೆ ಇದೆ. ಮೆದುಳಿನ ಬೆಳವಣಿಗೆಯಲ್ಲಿ ಕುಂಠಿತ ಉಂಟಾಗಲಿದೆ. ಹವಾಮಾನ ವೈಪರೀತ್ಯದಿಂದ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಸೇರಿದಂತೆ ಇತರೆ ರೋಗಗಳೂ ಹೆಚ್ಚಾಗತೊಡಗಿದ್ದು, ಜನ ಆತಂಕದಲ್ಲಿಯೇ ಬದುಕು ದೂಡುವಂತಾಗಿದೆ.