ADVERTISEMENT
Monday, July 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪಾಣಿಪೀಠ ಆಕೃತಿಯ ಮಲೆನಾಡಿನ ಇಕ್ಕೇರಿ ನಾಯಕರು ಕಟ್ಟಿಸಿದ ವಿಶಿಷ್ಟ ಪುಷ್ಕರಣಿಗಳು

admin by admin
March 5, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಪಾಣಿಪೀಠ ಆಕೃತಿಯ ಮಲೆನಾಡಿನ ಇಕ್ಕೇರಿ ನಾಯಕರು ಕಟ್ಟಿಸಿದ ವಿಶಿಷ್ಟ ಪುಷ್ಕರಣಿಗಳು : Saakshatv Naavu kelada charitre episode 15

ಪಶ್ಚಿಮ ಘಟ್ಟದ ಮಲೆನಾಡು ಮತ್ತು ಅದರ ಪರಿಸರ ಭೂಮಿಯ ಮೇಲೆ ಇರುವ ಭೂಸ್ವರ್ಗ ಇಲ್ಲಿ ಇರುವ ಅಸಂಖ್ಯಾತ ಸಸ್ಯ ಪ್ರಭೇದಗಳು, ಔಷಧೀಯ ಗುಣವುಳ್ಳ ಗಿಡಮೂಲಿಕೆಗಳು, ನೀರಿನ ಮೂಲ, ಹಣ್ಣು, ಕಾಯಿ, ವನ್ಯಜೀವಿಗಳು, ಪಕ್ಷಿಗಳು ಮತ್ತು ಜಲಚರಗಳು ಮಲೆನಾಡಿನ ಆಧಾರ ಸ್ತಂಭ. ಹೆಸರಿನಲ್ಲಿ ಸೂಚಿಸುವ ಹಾಗೆ ಮಲೆನಾಡಿನಲ್ಲಿ ಈ ಹಿಂದೆ 4 ರಿಂದ 6 ತಿಂಗಳುಗಳ ಕಾಲ ಮಳೆ ಸುರಿಯುತ್ತಿತ್ತು ಹಾಗಾಗಿ ನಮ್ಮ ಪೂರ್ವಜರು ಸ್ವಾಭಾವಿಕವಾಗಿ ಹೆಚ್ಚುವರಿ ಮಳೆಯ ನೀರನ್ನು ಹಿಡಿದಿಟ್ಟುಕೊಳ್ಳಲು ಮಲೆನಾಡಿನ ಉದ್ದಗಲಕ್ಕೂ ಅಸಂಖ್ಯಾತ ಪ್ರಮಾಣದಲ್ಲಿ ಕೆರೆಗಳನ್ನು ಕಟ್ಟಿಸಿರುವುದು ಗಮನಾರ್ಹ ಸಂಗತಿ. ನಮ್ಮ ಮಲೆನಾಡಿನ ಪಶ್ಚಿಮ ಘಟ್ಟ ನಮ್ಮ ರಾಜ್ಯಕ್ಕೆ ಸಾಕ್ಷಾತ್ ನೀರಿನ ತೊಟ್ಟಿಲು ಇದ್ದ ಹಾಗೆ, ಏಕೆಂದರೆ ಬಹುಪಾಲು ನದಿ, ಹೊಳೆ, ತೊರೆ, ಹಳ್ಳಗಳು ಹುಟ್ಟುವುದು ಇಲ್ಲಿಯ ಗುಡ್ಡ ಮತ್ತು ಬೆಟ್ಟಗಳಲ್ಲಿ. ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಎಲ್ಲಾ ನದಿಗಳು ಮಳೆಗಾಲದಲ್ಲಿ ತುಂಬಿ ಹರಿದರೆ ಬೇಸಿಗೆ ಕಾಲದಲ್ಲಿ ಭಾಗಷಃ ನದಿಗಳು ಒಣಗಿ ತನ್ನ ಅಸ್ತಿತ್ವವನ್ನು ಕಳೆದು ಕೊಳ್ಳುತ್ತಿವೆ. ಬಹುಶಃ ಇದನ್ನು ಅರಿತುಕೊಂಡಿದ್ದ ನಮ್ಮ ಪೂರ್ವಜರು ಮತ್ತು ಈ ಭಾಗವನ್ನು ಆಳಿದ ಅರಸರು ಸಾಕಷ್ಟು ಪ್ರಮಾಣದಲ್ಲಿ ಕೆರೆಗಳನ್ನು ನಿರ್ಮಿಸಿದರು. ಇದರ ಫಲಶೃತಿಯಾಗಿ ಇಂದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಕರೆಗಳು ಇದ್ದು ಅದರಲ್ಲೂ ಸೊರಬ ತಾಲ್ಲೂಕು ರಾಜ್ಯದಲ್ಲಿ ಅತಿ ಹೆಚ್ಚು ಕರೆಗಳನ್ನು ಹೊಂದಿರುವ ಖ್ಯಾತಿಗೆ ಪಾತ್ರವಾಗಿದೆ.

Related posts

King Mohammed VI sent congratulations to Morocco’s national football team

FIFAWORLDCUP2026- ರಾಜನ ದೂರದೃಷ್ಟಿಯ ಯುಕ್ತಿ…! ಬಿಳಿ ಚಿನ್ನದ ಶಕ್ತಿ..! ಭಾರತಕ್ಕೆ ಪಾಠವಾಗಲಿದೆ ಮೊರಾಕ್ಕೋ ಫುಟ್‍ಬಾಲ್ ಕ್ರಾಂತಿ..!

July 6, 2026
ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

July 6, 2026

ನಮ್ಮ ಮಲೆನಾಡನ್ನು ಆಳಿದ ಅರಸರೆಲ್ಲರು ಇಲ್ಲಿನ ಜಲಮೂಲ ಮತ್ತು ನೀರಿನ ಸಂರಕ್ಷಣೆಗೆ ಮುಂದಾಗಿದ್ದರು, ಇವರಲ್ಲಿ ವಿಶೇಷವಾಗಿ ವಿಜಯನಗರದ ರಾಯರ ಪಾತ್ರ ಬಹು ಮುಖ್ಯವಾಗಿದೆ. ಕೇವಲ ಮಲೆನಾಡು ಅಲ್ಲದೆ ಇಡೀ ದಕ್ಷಿಣ ಭಾರತದಲ್ಲಿ ಜಲ ಮೂಲ ಮತ್ತು ನೀರಿನ ಸಂರಕ್ಷಣೆಗಾಗಿ ಸಹಸ್ರಾರು ಕೆರೆ, ಕಟ್ಟೆ ಮತ್ತು ನೀರಾವರಿ ಯೋಜನೆಗಳನ್ನು ರೂಪಿಸುವಲ್ಲಿ ವಿಜಯನಗರದ ಅರಸರ ಕೊಡಿಗೆ ಬಹು ದೊಡ್ಡದು. ವಿಜಯನಗರ ಸಾಮ್ರಾಜ್ಯದ ನೀರಾವರಿ ಯೋಜನೆಯನ್ನು ಸಹಕಾರ ಗೊಳಿಸಲು “ಅಮರನಾಯಕತನ” ಎಂದು ಕರೆಯಲ್ಪಡುವ ನಾಯಕ್ ಯೋಧರ ಅಥವಾ ನಾಯಕ ಸಾಮಂತರ ಅಡಿಯಲ್ಲಿ ಇದನ್ನು ವಿಜಯನಗರದ ರಾಯರು ಸಹಕಾರಗೊಳಿಸಿದರು. ಮಲೆನಾಡಿನ ಪಶ್ಚಿಮ ಘಟ್ಟಗಳ ಬೆಟ್ಟ, ಗುಡ್ಡ, ಹುಲ್ಲುಗಾವಲು, ನೀರಿನ ಮೂಲವನ್ನು ಸಂರಕ್ಷಿಸಲು ಕೆಲವು ಸ್ಥಳಗಳನ್ನು ಸಂರಕ್ಷಿತ ವಲಯ ಎಂದು ಘೋಷಿಸಿದರೆ, ನದಿಯ ಪಾತ್ರ ಮತ್ತು ನದಿಗಳ ಸಂಗಮ ಕ್ಷೇತ್ರದಲ್ಲಿ ದೇವಾಲಯವನ್ನು ಕಟ್ಟಿಸಿ ಧಾರ್ಮಿಕವಾಗಿ ನದಿಯ ಪರಿಸರವನ್ನು ಉಳಿಸಲು ವಿಜಯನಗರದ ಅರಸರು ಕೈಗೊಂಡ ಯೋಜನೆ ನಿಜಕ್ಕೂ ಶ್ಲಾಘನೀಯ.

Saakshatv Naavu kelada charitre episode 15

ಇಡೀ ದಕ್ಷಿಣ ಭಾರತದ ಉದ್ದಗಲಕ್ಕೂ ವಿಜಯನಗರದ ಅರಸರು ನಿರ್ಮಿಸಿದ ಕೆರೆ, ಕಟ್ಟೆ ಮತ್ತು ಪುಷ್ಕರಣಿಗಳು ಎಷ್ಟು ಇತ್ತು ಅಂದರೆ ಬ್ರಿಟೀಷ್ ಸರ್ಕಾರಕ್ಕೆ ಹೊಸ ಕೆರೆ ಕಟ್ಟಲು ಸ್ಥಳವೇ ಇರಲಿಲ್ಲ. ಬ್ರಿಟೀಷ್ ಉನ್ನತ ಮಟ್ಟದ ಅಧಿಕಾರಿ ಸರ್ ಥಾಮಸ್ ಮುನ್ರೋ ಅವರು ವಿಜಯನಗರದ ನೀರಾವರಿ ಪದ್ದತಿಯ ಬಗ್ಗೆ ತಮ್ಮ ದಾಖಲೆಯಲ್ಲಿ ಈ ರೀತಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ – “to attempt the construction of new tanks is perhaps a more hopeless experiment than to repair of those which have filled up, for there is scarcely any place where a tank can be made to advantage that has not been applied to this purpose by the Vijayanagara Rulers”. ಶಿವಮೊಗ್ಗ ಜಿಲ್ಲೆಯಲ್ಲಿ ಇರುವ ಶ್ರೀ ಹರಿಹರ ರಾಯರ 1413ರ ಶಾಸನ ಹಾಳು ಬಿದ್ದ ಕೆರೆ, ಕಟ್ಟೆ, ಬಾವಿ, ರಾಜ್ಯ, ಆಶ್ರಯಕ್ಕೆ ಒಳಪಟ್ಟ ಮನುಷ್ಯ, ಬ್ರಾಹ್ಮಣ ಮತ್ತು ದೇವಾಲಯಗಳನ್ನು ಸಂರಕ್ಷಿಸಿ ಅದನ್ನು ಜೀರ್ಣೋದ್ಧಾರ ಮಾಡುವವರು ನಿಜ ಅರ್ಥದಲ್ಲಿ ಸದ್ಗುರುಗಳು ಎಂದು ಹೇಳುತ್ತದೆ.

ಶ್ರೀ ಕೃಷ್ಣದೇವರಾಯರ ಅಪ್ಪಣೆ ಮೇರೆಗೆ ಕೆಳದಿ ಸದಾಶಿವ ನಾಯಕರು ಮದಗದಕೆರೆಯನ್ನು ದುರಸ್ತಿಗೊಳಿಸಿ ಅದರ ನಿರ್ವಹಣೆ ಮಾಡಿರುವ ಬಗ್ಗೆ ಹಲವಾರು ದಾಖಲೆಗಳಿವೆ. ಕೆಳದಿ ಸದಾಶಿವ ನಾಯಕರು ತಮ್ಮ ಜೀವಿತಾವಧಿಯಲ್ಲಿ ಸರಿಸುಮಾರು 14 ಕೆರೆಗಳನ್ನು ನಿರ್ಮಿಸಿದ್ದು ಅದರಲ್ಲಿ ಅತಿ ದೊಡ್ಡ ಕೆರೆಯಾಗಿರುವ ಹಿರಿಯಕೆರೆ ಇಂದಿಗೂ ಸಹಾ ಸುಸ್ಥಿತಿಯಲ್ಲಿ ಇದ್ದು ಅದರ ಉಪಯೋಗವನ್ನು ಜನರು ಪಡೆಯುತ್ತಿದ್ದಾರೆ. ಅಂದು ಕೆರೆಗಳನ್ನು ಎರಡು ರೀತಿಯಲ್ಲಿ ವಿಭಜಿಸುತ್ತಿದ್ದರು ಒಂದು ಕಾಲುವೆ ಮುಖಾಂತರ ನದಿಯ ನೀರನ್ನು ಹರಿಸಿ ತುಂಬಿಸುವ ಕೆರೆಗಳು ಇನ್ನೊಂದು ನಮ್ಮ ಮಲೆನಾಡಿನಲ್ಲಿ ಕಾಣಲು ಸಿಗುವ ಮಳೆ ನೀರು ಅವಲಂಬಿತ ಕೆರೆಗಳು. ಇನ್ನೂ ನಮ್ಮನ್ನು ಆಳಿದ ಅಂದಿನ ಕಾಲದ ರಾಜರು ಎಷ್ಟು ಪ್ರಜ್ಞಾವಂತರಾಗಿದ್ದರು ಎಂದರೆ ಗುಡ್ಡಗಾಡಿನಿಂದ ಹರಿದು ಬರುವ ಮಳೆಯ ನೀರಿನಿಂದ ತುಂಬುವ ಮೊದಲ ಕೆರೆಯ ಹೆಚ್ಚುವರಿ ನೀರನ್ನು ರಾಜಕಾಲುವೆಯ ಮುಖಾಂತರ ಇನ್ನೊಂದು ಕೆರೆಗೆ ಹರಿಸಿ ಅದು ತುಂಬಿದ ಮೇಲೆ ಮತ್ತೆ ರಾಜ ಕಾಲುವೆಯ ಮುಖಾಂತರ ಇನ್ನೊಂದು ಕೆರೆಗೆ ನೀರು ತುಂಬಿಸುವ ವ್ಯವಸ್ಥೆಯನ್ನು ಮಾಡಿದ್ದರು.

ನಮ್ಮ ಮಲೆನಾಡಿನ ಪರಿಸರದಲ್ಲಿ ರಾಜಕಾಲುವೆಯ ಮುಖಾಂತರ ಅದೆಷ್ಟೋ ಕೆರೆಗಳು ಒಂದಕ್ಕೊಂದು ಸಂಪರ್ಕ ಹೊಂದಿವೆ. ವಿಜಯನಗರದ ರಾಯರು ತಾವುಗಳಲ್ಲದೆ ಎಲ್ಲಾ ವರ್ಗದ ಜನರು ಸಹಾ ಕೆರೆಗಳನ್ನು ನಿರ್ಮಾಣ ಮಾಡುವಲ್ಲಿ ಮತ್ತು ಹಾಳು ಬಿದ್ದ ಕೆರೆಗಳನ್ನು ಜೀರ್ಣೋದ್ಧಾರ ಮಾಡಲು ಪ್ರೋತ್ಸಾಹಿಸುತ್ತಿದ್ದರು ಎನ್ನಲು ಹಲವಾರು ಶಾಸನಗಳು ದೊರೆತಿವೆ. ಶಾಸನಗಳಲ್ಲಿ ನೀರನ್ನು ಸಂಗ್ರಹಿಸುವ ಈ ವ್ಯವಸ್ಥೆಯನ್ನು ಕೆರೆ, ಕಟ್ಟೆ, ಸಾಗರ, ಸಮುದ್ರ, ತಟಾಕು, ಸರೋವರ, ತೀರ್ಥ, ಮದಗದ, ಕುಂಟೆ, ಹಿರಿಯ ಕೆರೆ, ಹೆಗ್ಗೇರೆ, ದೊಡ್ಡ ಕೆರೆ, ಸಣ್ಣ ಕೆರೆ, ಚಿಕ್ಕ ಕೆರೆ ಹೀಗೆ ಹತ್ತು ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತಿತ್ತು.

Saakshatv Naavu kelada charitre episode 15

1565ರ ತಾಳಿಕೋಟೆಯ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯದ ಅಸಂಖ್ಯಾತ ಸಾಮಂತರು ಸ್ವತಂತ್ರರಾಗುತ್ತಾರೆ ಇವರಲ್ಲಿ ಇಕ್ಕೇರಿಯ ನಾಯಕರು ಸಹಾ ಒಬ್ಬರು. ವಿಜಯನಗರದ ರಾಜಕೀಯ ಧರ್ಮ, ಸಾಮಾಜಿಕ, ಆಡಳಿತ ನೀತಿಯನ್ನು ಮತ್ತು ಪದ್ಧತಿಯನ್ನೂ ಅಳವಡಿಸಿಕೊಂಡ ಇಕ್ಕೇರಿಯ ನಾಯಕರು ಅದೇ ರೀತಿ ರಾಯರು ಪಾಲಿಸುತ್ತಿದ್ದ ಕೆರೆಧರ್ಮವನ್ನು ಸಹಾ ಚಾಚು ತಪ್ಪದೆ ಪಾಲಿಸುತ್ತಿದ್ದರು. ವಿಜಯನಗರ ಆಳ್ವಿಕೆಯ ಕಾಲದಲ್ಲಿ ಒಬ್ಬ ವ್ಯಕ್ತಿಯು ನೀರಾವರಿ ಕಾರ್ಯಗಳನ್ನು ಮಾಡಿಸುವುದು ಏಳು ಶ್ರೇಯಸ್ಕರ ಕಾರ್ಯಗಳಲ್ಲಿ ಒಂದಾಗಿತ್ತು ಎಂಬ ದೃಢವಾದ ನಂಬಿಕೆಯಿತ್ತು. ಇದನ್ನು ಇಕ್ಕೇರಿ ನಾಯಕರು ಸಹಾ ಮುಂದೆವರಿಸಿರುವುದು ಗಮನಾರ್ಹ ಸಂಗತಿ. ಮಗನನ್ನು ಪಡೆಯುವುದು, ಸಸಿಗಳನ್ನು ನೆಟ್ಟು ಕಾಡು ಬೆಳೆಸುವುದು, ಶಿವ ದೇವಾಲಯವನ್ನು ಕಟ್ಟುವುದು, ಧರ್ಮ ಪ್ರತಿಷ್ಠಾಪನೆ, ರಾಜ್ಯವನ್ನು ಸ್ಥಾಪಿಸುವುದು, ನಿಕ್ಷೇಪಗಳನ್ನು ಹೊಂದುವುದು ಮತ್ತು ಕೆರೆ ಕಟ್ಟೆಗಳನ್ನು ಕಟ್ಟುವುದು ಏಳು ಶ್ರೇಯಸ್ಕರ ಕಾರ್ಯಗಳು ಎಂದು ನಂಬಿದ್ದರು ಇಕ್ಕೇರಿಯ ನಾಯಕರು.

ಇಕ್ಕೇರಿಯ ಶ್ರೀ ರಾಮರಾಜ ನಾಯಕರ 1573ರ ಶಾಸನ ಒಂದರ ಪ್ರಕಾರ ಕೆಳದಿಯ ಶ್ರೀಮಂತ ವ್ಯಾಪಾರಿಗಳು ಮತ್ತು ಶೆಟ್ಟಿಗಳು ಯಾವುದೇ ಮಕ್ಕಳಿಲ್ಲದೆ ಸತ್ತರೆ ಅವರ ಹತ್ತಿರದ ರಕ್ತ ಸಂಬಂಧಿಗಳು ಅಥವಾ ಸತ್ತ ವ್ಯಕ್ತಿಯ ವಿಧವೆ ಆಸ್ತಿಯನ್ನು ಸಮವಾಗಿ ಹಂಚಿಕೊಳ್ಳಲು ಅವಕಾಶವಿದ್ದು ಅದರಲ್ಲಿ ಒಂದು ಭಾಗವನ್ನು ಕೆರೆ, ಕಟ್ಟೆ ಮತ್ತು ದೇವಾಲಯಗಳ ನಿರ್ಮಾಣಕ್ಕೆ ವಿನಿಯೋಗ ಮಾಡಿಕೊಳ್ಳ ಬೇಕಿತ್ತು. ಇಕ್ಕೇರಿ ಸಂಸ್ಥಾನದ ಪ್ರಥಮ ಸ್ವತಂತ್ರ ರಾಜ ಎಂಬ ಖ್ಯಾತಿಗೆ ಪಾತ್ರರಾದ ಶ್ರೀ ವೆಂಕಟಪ್ಪ ನಾಯಕರು ತಮ್ಮ ಜೀವಿತಾವಧಿಯಲ್ಲಿ ಹಲವಾರು ಕೆರೆಗಳನ್ನು ಕಟ್ಟಿಸುತ್ತಾರೆ – ತಮ್ಮ ಅಜ್ಜ ಸದಾಶಿವ ನಾಯಕರ ಹೆಸರಿನಲ್ಲಿ ಸದಾಶಿವಸಾಗರ ಎಂಬ ಪುರವನ್ನು ಕಟ್ಟಿಸಿ ಅದರಲ್ಲಿ ಅರಮನೆ ಮತ್ತು ಕೆರೆಯನ್ನು ನಿರ್ಮಾಣ ಮಾಡಿಸಿದನು ಅದೇ ರೀತಿ ಸಂಗಮೇಶ್ವರ, ಆನಂದಪುರ, ಭುವನಗಿರಿದುರ್ಗದಲ್ಲಿ (ಕವಲೆದುರ್ಗ) ಕೆರೆಗಳನ್ನು ಮತ್ತು ಕೆಳದಿ ಅರಮನೆಯ ಬಳಿ ಸಂಪೆಕಟ್ಟೆ ಎಂಬ ಒಂದು ಅಣೆಕಟ್ಟನ್ನು ಕಟ್ಟಿಸಿರುವ ಬಗ್ಗೆ ಉಲ್ಲೇಖವಿರುತ್ತದೆ.

ಕರಾವಳಿಯ ಕಾಸರಗೋಡಿನ ಕುಂಬಳದ ಪುಷ್ಕರಣಿಯ ಮಧ್ಯದಲ್ಲಿ ಸ್ಥಾಪಿಸಲಾಗಿರುವ ಅನಂತಪದ್ಮನಾಭಸ್ವಾಮಿ ದೇವಾಲಯದ ವಿನ್ಯಾಸ ಶೈಲಿಯಿಂದ ಪ್ರಭಾವಿತಗೊಂಡು ಸಾಗರದ ಆನಂದಪುರದಲ್ಲಿ ಶ್ರೀ ವೆಂಕಟಪ್ಪ ನಾಯಕರು ನಿರ್ಮಿಸಿದ ಚಂಪಕಸರಸಿ ಪುಷ್ಕರಣಿ ಒಂದು ಅದ್ಭುತವಾದ ಸ್ಮಾರಕವಾಗಿದೆ. ಇನ್ನೂ ರಾಜ್ಯದ ಮೊಟ್ಟಮೊದಲ ಕೃಷಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ ಮಹಾನ್ ಪರಾಕ್ರಮಿ ಶ್ರೀ ಶಿವಪ್ಪ ನಾಯಕರು ಸ್ವಾಭಾವಿಕವಾಗಿ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಹಾಗೂ ನೆರವು ನೀಡಲು ಹಲವಾರು ಕೆರೆಗಳನ್ನು ನಿರ್ಮಾಣ ಮಾಡಿರುವ ಬಗ್ಗೆ ಶ್ರೀ ಶಿವತತ್ವರತ್ನಾಕರದಲ್ಲಿ ಉಲ್ಲೇಖ ಇದೆ. ದೇವಾಲಯದ ಪ್ರಾಂಗಣದಲ್ಲಿ ಮತ್ತು ಅದಕ್ಕೆ ಲಗತ್ತಾಗಿ ನಿರ್ಮಾಣ ಮಾಡಿದ ನೀರಿನ ವ್ಯವಸ್ಥೆಗೆ ನಮ್ಮ ಪೂರ್ವಜರು ಪುಷ್ಕರಣಿ ಅಥವಾ ಕಲ್ಯಾಣಿ ಎಂದು ಕರೆಯುತ್ತಿದ್ದರು. ಇಕ್ಕೇರಿ ನಾಯಕರು ಮಲೆನಾಡು ಮತ್ತು ಕರಾವಳಿಯ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೇವಾಲಯಗಳನ್ನು ಕಟ್ಟಿ ಅದರ ಪಕ್ಕದಲ್ಲಿ ಪುಷ್ಕರಣಿಯನ್ನು ಸಹಾ ನಿರ್ಮಿಸಿದ್ದಾರೆ.

ವಿಜಯನಗರದ ಕಾಲದಲ್ಲಿ ಪುಷ್ಕರಣಿಗಳನ್ನು ಹಲವಾರು ಆಕೃತಿಯಲ್ಲಿ ನಿರ್ಮಾಣ ಮಾಡಿದ್ದು ಅದರಲ್ಲಿ ಚಚ್ಚೌಕ, ಚತುರ್ಭುಜ, ಆಯತಾಕಾರ, ಬಹುಭುಜಾಕೃತಿ, ವೃತ್ತಾಕಾರ ಮತ್ತು ಅರೆ ವೃತ್ತಾಕಾರ ಸಾಮಾನ್ಯವಾಗಿವೆ. ಪುಷ್ಕರಣಿಗಳನ್ನು ನಿರ್ಮಿಸಿರುವ ಪ್ರದೇಶದ ಭೌಗೋಳಿಕ ಸ್ಥಿತಿಯನ್ನು ಆಧರಿಸಿ ಪುಷ್ಕರಣಿಯನ್ನು ಪ್ರವೇಶಿಸಲು ಒಂದು ಕಡೆ, ಎರಡು ಕಡೆ, ಮೂರು ಕಡೆ ಅಥವಾ ನಾಲ್ಕು ಕಡೆಗಳಲ್ಲೂ ಮೆಟ್ಟಿಲುಗಳನ್ನು ನೀಡಲಾಗುತ್ತಿತ್ತು. ವಿಜಯನಗರದ ಪತನದ ನಂತರದಲ್ಲಿ ಸ್ವತಂತ್ರವಾಗಿ ರಾಜ್ಯಭಾರ ಮಾಡಲು ಪ್ರಾರಂಭಿಸಿದ ಇಕ್ಕೇರಿ ನಾಯಕರು ಪುಷ್ಕರಣಿ ಮತ್ತು ಕಲ್ಯಾಣಿಗಳ ನಿರ್ಮಾಣದಲ್ಲಿ ತಮ್ಮದೇ ಆದ ವಿಶಿಷ್ಠವಾದ ಛಾಪನ್ನು ನೀಡಿದ್ದಾರೆ ಅದುವೇ ಆಂಗ್ಲ ಭಾಷೆಯ ‘T’ ಆಕೃತಿಯನ್ನು ಹೋಲುವ ಪುಷ್ಕರಣಿಗಳು. ಈ ಪುಷ್ಕರಣಿಯನ್ನು ಬಹಳ ಸೂಕ್ಷ್ಮವಾಗಿ ನೋಡಿದರೆ ಇದು ದೇವಾಲಯಗಳಲ್ಲಿ ಪ್ರತಿಷ್ಠಾಪಿಸುವ ಪಾಣಿಪೀಠ ಆಕೃತಿಯನ್ನು ಹೋಲುತ್ತದೆ. ಇಕ್ಕೇರಿ ನಾಯಕರು ಈ ರೀತಿಯ ಪುಷ್ಕರಣಿಗಳನ್ನು ನಿರ್ಮಿಸಿದ್ದು ಇದರಲ್ಲಿ ಮತ್ತೆ ಎರಡು ರೀತಿಯ ಶೈಲಿ ಇರುವುದು ಗಮನಾರ್ಹ ಸಂಗತಿ. ಮೊದಲನೆಯ ಶೈಲಿಯಲ್ಲಿ ಪುಷ್ಕರಣಿಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಲು ಚೌಕಾಕಾರದ ಕಲ್ಲಿನ ಕೊಳವನ್ನು ಕಟ್ಟಿಸಿ ಅದರ ಸುತ್ತಲೂ T ಅಥವಾ ಪಾಣಿಪೀಠ ಆಕೃತಿಯ ಸುರಕ್ಷತಾ ಕಲ್ಲಿನ ಗೊಡೆಯನ್ನು ಕಟ್ಟುವುದು. ಇನ್ನೊಂದು ಶೈಲಿಯಲ್ಲಿ ಪುಷ್ಕರಣಿಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಲು ಕೊಳ ಮತ್ತು ಅದರ ಸುತ್ತಲೂ ಇರುವ ಕಲ್ಲಿನ ಸುರಕ್ಷತಾ ಗೋಡೆ ಎರಡನ್ನೂ ಸಹಾ T ಅಥವಾ ಪಾಣಿಪೀಠ ಆಕೃತಿಯಲ್ಲಿ ಕಟ್ಟುವುದು. ಮೇಲ್ಕಂಡ ಎರಡೂ ಶೈಲಿಯಲ್ಲಿ ಆಂಗ್ಲ ಭಾಷೆಯ ಅಕ್ಷರ T ಬಾಲದ ಕಡೆಯಿಂದ ಕೊಳಕ್ಕೆ ಇಳಿಯಲು ಮೆಟ್ಟಿಲುಗಳನ್ನು ನೀಡಲಾಗುತ್ತಿತ್ತು. ಪುಷ್ಕರಣಿಯ ಕೊಳ ಮತ್ತು ಸುರಕ್ಷತಾ ಗೋಡೆಯ ಮಧ್ಯದಲ್ಲಿ ಸ್ಥಳಾವಕಾಶವನ್ನು ಒದಗಿಸಿ ಸುತ್ತಲೂ ಓಡಾಡಲು ವ್ಯವಸ್ಥೆಯನ್ನು ಮಾಡಲಾಗಿತ್ತು.

ಇನ್ನೂ ಇಕ್ಕೇರಿ ನಾಯಕರ ಇತಿಹಾಸದ ಪುಟಗಳನ್ನು ಒಮ್ಮೆ ಮೆಲುಕು ಹಾಕಿದರೆ ಈ ವಿಶಿಷ್ಠವಾದ ಪುಷ್ಕರಣಿಗಳ ನಿರ್ಮಾಣವನ್ನು ಶ್ರೀ ಶಿವಪ್ಪ ನಾಯಕರ ಕಾಲದಲ್ಲಿ ಪ್ರಾರಂಭಿಸಲಾಗಿತ್ತು. ಭುವನಗಿರಿ (ಕವಲೆದುರ್ಗ) ಕೋಟೆಯ ಒಳಗೆ ಇರುವ ಅರಮನೆ ಹಿಂಭಾಗದ ಶ್ರೀ ಶಾಂತಗಂಗೆ ಪುಷ್ಕರಣಿ ಮತ್ತು ಶ್ರೀ ಆದಿಶೇಷನ ನಾಗ ತೀರ್ಥ, ಹಿಲ್ಕುಂಜ್ (ಬರೆಕಲ್ಲು) ಬತೇರಿಯ ಪುಷ್ಕರಣಿ, ದೇವಗಂಗದಲ್ಲಿ ಇರುವ ಒಂದು ಕೊಳ, ಹೆಂಡಗದ್ದೆಯ ಘಳಿಗೆ ಬಟ್ಟಲು ಪುಷ್ಕರಣಿ, ಕೆಳದಿಯ ಶ್ರೀ ಗೋಪಾಲಕೃಷ್ಣ ದೇವಾಲಯದ ಪುಷ್ಕರಣಿ, ವರದಾಮೂಲದ ಕಲ್ಯಾಣಿ ಪಕ್ಕದಲ್ಲಿ ಇರುವ ಪುಷ್ಕರಣಿ, ಕಟ್ಟಿನ ಹೊಳೆಯ ಗೌರಿ ತೀರ್ಥ, ಮಲವಗೊಪ್ಪದ ಶ್ರೀ ಚನ್ನಬಸವೇಶ್ವರ ದೇವಾಲಯದ ಪುಷ್ಕರಣಿ, ಕರಾವಳಿಯ ಉಡುಪಿ ಹತ್ತಿರ ಇರುವ ಪುತ್ತೂರಿನ ಗಡಿಯಾರ ಪುಷ್ಕರಣಿ ಹೀಗೆ ಹತ್ತು ಹಲವಾರು ಪಾಣಿಪೀಠ ಆಕೃತಿಯ ವಿಶಿಷ್ಠವಾದ ಪುಷ್ಕರಣಿಗಳನ್ನು ಇಕ್ಕೇರಿ ನಾಯಕರು ಆಳಿದ ಮಲೆನಾಡು ಮತ್ತು ಕರಾವಳಿಯಲ್ಲಿ ಕಾಣಬಹುದು.

 

Saakshatv Naavu kelada charitre episode 15
ಟಿಪ್ಪುವಿನ ಮರಣದ ನಂತರ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ ಅಧೀನದಲ್ಲಿ ಮರುಸ್ಥಾಪನೆ ಗೊಂಡ ಮೈಸೂರು ರಾಜ್ಯದ ಮೊಟ್ಟಮೊದಲ ಸರ್ವೇಗೆ ಅಂದಿನ‌ ಬ್ರಿಟೀಷ್ ಸರ್ಕಾರ ಮುಂದಾಗುತ್ತದೆ. ಈ ಕಾರ್ಯಕ್ಕೆ ನೇಮಕಗೊಂಡ ಕರ್ನಲ್ ಕೋಲಿನ್ ಮೆಕೆಂಜಿ 1799 ರಿಂದ 1810ರ ವರೆಗೂ ಹಳೆಯ ಮೈಸೂರು ಮತ್ತು ಮಲೆನಾಡಿನ ಉದ್ದಗಲಕ್ಕೂ ಸರ್ವೇ ಕಾರ್ಯವನ್ನು ಕೈಗೊಳ್ಳುತ್ತಾನೆ. ಕೋಲಿನ್ ಮೆಕೆಂಜಿ ಅವರಿಗೆ ಮಿಲಿಟರಿ ದೃಷ್ಟಿಕೋನದಿಂದ ಮೈಸೂರು, ಮಲಬಾರ್ ಮತ್ತು ಕೆನರಾ ಪ್ರದೇಶದ ಪ್ರಮುಖ ನಗರ, ಊರು ಮತ್ತು ಸ್ಥಳದ ನಕ್ಷೆಯನ್ನು ತಯಾರಿಸುವ ಜವಾಬ್ದಾರಿಯನ್ನು ಬ್ರಿಟಿಷ್ ಸರ್ಕಾರ ಅವರಿಗೆ ನೀಡುತ್ತದೆ. ಆದರೆ ಕೋಲಿನ್ ಮೆಕೆಂಜಿ ಪ್ರಮುಖ ಸ್ಥಳಗಳ ನಕ್ಷೆ ತಯಾರಿಕೆಗೆ ಸೀಮಿತವಾಗದೆ ತನ್ನ ಸುದೀರ್ಘ ಸಮೀಕ್ಷೆಯ ಅವದಿಯಲ್ಲಿ ಮಲೆನಾಡು, ಹಳೆ ಮೈಸೂರು, ಮಲಬಾರ್ ಮತ್ತು ಕೆನರಾ ಪ್ರಾಂತ್ಯದಲ್ಲಿ ಸಂಚರಿಸಿ ನಮ್ಮ ಪರಂಪರೆ ಹಾಗೂ ನಿಜವಾದ ಸಂಪತ್ತುಗಳಾಗಿದ್ದ ಕಡತಗಳು, ದಾಖಲೆ, ಶಿಲ್ಪಗಳು, ಶಾಸನ ಮತ್ತು ಹಲವಾರು ಅಮೂಲ್ಯ ಗ್ರಂಥಗಳನ್ನು ಶೇಖರಿಸಿ ಅದನ್ನು ತನ್ನ ಸುಪರ್ದಿಯಲ್ಲಿ ಇಟ್ಟುಕೊಳ್ಳುತ್ತಾನೆ. ಕೋಲಿನ್ ಮೆಕೆಂಜಿ ಪ್ರತಿ ಹಳ್ಳಿಗೆ ಭೇಟಿ ನೀಡಿದಾಗ ಅಲ್ಲಿಯ ಸ್ಥಳೀಯರಿಂದ ಆ ಪ್ರದೇಶದ ಸ್ಥಳ ಪುರಾಣವನ್ನು ತಿಳಿದುಕೊಂಡು ಅದನ್ನು ದಾಖಲಿಸುತ್ತಾನೆ. ಈ ದಾಖಲೆಗಳು ಮುಂದಿನ ದಿನಗಳಲ್ಲಿ ಮೆಕೆಂಜಿ ಕೈಫಿಯತ್ (Kaifiyat) ಎಂದು ಕರೆಯಲ್ಪಡುತ್ತದೆ.

ಇನ್ನೂ ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಕೆರೆಧರ್ಮಕ್ಕೆ ಸಂಬಂಧಿಸಿದಂತೆ ಮೆಕೆಂಜಿಯ ಕೈಫಿಯತ್ ನಲ್ಲಿ ವಿವರಣಾತ್ಮಕವಾಗಿ ಮಾಹಿತಿಯನ್ನು ನೀಡಲಾಗಿದೆ. ಕೆರೆಧರ್ಮಕ್ಕೆ ಸಂಬಂಧಿಸಿದಂತೆ ಶಾಸನಗಳಲ್ಲಿ ಸಿಗುವ ಮಾಹಿತಿ ಸಂಕ್ಷಿಪ್ತವಾಗಿದ್ದರೆ ಕೈಫಿಯತ್ ನಲ್ಲಿ ಸಿಗುವ ಮಾಹಿತಿ ವಿವರಣಾತ್ಮಕವಾಗಿದೆ. ಆದರೆ ನಮ್ಮ ದುರಾದೃಷ್ಟವಶಾತ್ ಒಂದು ಕಡೆ ಕೈಫಿಯತ್ ಇರಬಹುದು ಇನ್ನೊಂದು ಕಡೆ ಶಾಸನಗಳು ಇರಬಹುದು ನಮ್ಮ ಇಂದಿನ ಸರ್ಕಾರ, ಸಮಾಜ ಮತ್ತು ಜನರು ನಮ್ಮ ಪೂರ್ವಜರು ಹಿಂದಿನಿಂದಲೂ ಆಚರಿಸಿಕೊಂಡು ಪಾಲನೆ ಮಾಡಿಕೊಂಡು ಬಂದ ಕೆರೆಧರ್ಮವನ್ನು ಮರೆತಿರುವುದು ನಿಜಕ್ಕೂ ಬೇಸರದ ಸಂಗತಿ. ಇಂದು ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವ ಪಶ್ಚಿಮ ಘಟ್ಟದ ಮಳೆಕಾಡಿನ ಪರಿಣಾಮವಾಗಿ ಮಲೆನಾಡಿನಲ್ಲಿ ಬೀಳುವ ಮಳೆಯ ಪ್ರಮಾಣದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದ್ದರೆ ಇತ್ತಾ ಮಳೆ ನೀರನ್ನು ನಂಬಿರುವ ಅಸಂಖ್ಯಾತ ಕೆರೆಗಳು ಕಣ್ಮರೆಯಾಗುತ್ತಿದ್ದರೆ ಇನ್ನಷ್ಟು ಕೆರೆಗಳು ಒತ್ತುವರಿಯಾಗಿ ತನ್ನ ಮೂಲ ಸ್ವರೂಪದ ಜೊತೆಗೆ ತನ್ನ ಮೂಲ ಉದ್ದೇಶವನ್ನು ನಿಭಾಯಿಸಲು ಅಶಕ್ತವಾಗಿದೆ. ಕರ್ನಾಟಕ ರಾಜ್ಯದ ಪಾಲಿಗೆ ನೀರಿನ ತೊಟ್ಟಿಲು ಎಂದು ಕರೆಯಲ್ಪಡುವ ಪಶ್ಚಿಮ ಘಟ್ಟದ ಮಲೆನಾಡಿನ ನೀರಿನ ಮೂಲ ಮತ್ತು ನಮ್ಮ ಪೂರ್ವಜರು ಕಟ್ಟಿಸಿದ ಕೆರೆಗಳು ಹಾಗೂ ರಾಜ ಕಾಲುವೆಗಳನ್ನು ಸಂರಕ್ಷಿಸಿಕೊಂಡು ಪ್ರಾಮಾಣಿಕವಾಗಿ ಕೆರೆಧರ್ಮವನ್ನು ಪಾಲನೆ ಮಾಡಿದರೆ ಅದು ನಿಜಾರ್ಥದಲ್ಲಿ ಜಲ ಸಂರಕ್ಷಣೆಯಾಗುತ್ತದೆ.

ಲೇಖನ ಮತ್ತು ಚಿತ್ರಗಳು :-
ಅಜಯ್ ಕುಮಾರ್ ಶರ್ಮಾ
ಇತಿಹಾಸ ಅಧ್ಯಯನಕಾರರು ಮತ್ತು ಪರಿಸರ ಹೋರಾಟಗಾರ
ಶಿವಮೊಗ್ಗ

Tags: #saakshatvಪಾಣಿಪೀಠ ಆಕೃತಿಮಲೆನಾಡಿನ ಇಕ್ಕೇರಿ ನಾಯಕರು
ShareTweetSendShare
Join us on:

Related Posts

King Mohammed VI sent congratulations to Morocco’s national football team

FIFAWORLDCUP2026- ರಾಜನ ದೂರದೃಷ್ಟಿಯ ಯುಕ್ತಿ…! ಬಿಳಿ ಚಿನ್ನದ ಶಕ್ತಿ..! ಭಾರತಕ್ಕೆ ಪಾಠವಾಗಲಿದೆ ಮೊರಾಕ್ಕೋ ಫುಟ್‍ಬಾಲ್ ಕ್ರಾಂತಿ..!

by admin
July 6, 2026
0

ಹಾಗಂತ... ಇದು ಖಂಡಿತವಾಗಿಯೂ ಫುಟ್‍ಬಾಲ್ ಜಗತ್ತಿನ ಕಾಲ್ಪನಿಕ ಕಥೆಯಂತೂ ಅಲ್ಲವೇ ಅಲ್ಲ. ಬದಲಾಗಿ ಮತ್ತೊಂದು ಸಣ್ಣ ದೇಶದ ಫುಟ್‍ಬಾಲ್ ಆಟದ ಮಹೋನ್ನತ ಪರ್ವದ ನೈಜ ಚಿತ್ರಣ. ಒಬ್ಬ...

ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

by Shwetha
July 6, 2026
0

ಮನೆಯಲ್ಲಿರುವ ಹಳೆಯ ಚಿನ್ನವನ್ನು ಲಾಕರ್ ನಲ್ಲಿಟ್ಟು ಸುಮ್ಮನೆ ಕೂರುವ ಬದಲು ಅದರಿಂದಲೇ ಲಾಭ ಗಳಿಸುವ ಸುವರ್ಣಾವಕಾಶವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ದೇಶದ ಚಿನ್ನದ ಆಮದು ಪ್ರಮಾಣವನ್ನು ತಗ್ಗಿಸುವ...

ಫಿಂಗರ್ ಚಿಪ್ಸ್ ನೀಡಲಿಲ್ಲ ಎಂದು ಗಂಡನ ಮೇಲೆ ಕೇಸ್: ಏನ್ರೀ ಇದು ತಮಾಷೆ ಎಂದು ಜಡ್ಜ್ ಗರಂ

ಫಿಂಗರ್ ಚಿಪ್ಸ್ ನೀಡಲಿಲ್ಲ ಎಂದು ಗಂಡನ ಮೇಲೆ ಕೇಸ್: ಏನ್ರೀ ಇದು ತಮಾಷೆ ಎಂದು ಜಡ್ಜ್ ಗರಂ

by Shwetha
July 6, 2026
0

ಗರ್ಭಿಣಿಯಾಗಿದ್ದಾಗ ಪತಿ ತನಗೆ ಫಿಂಗರ್ ಚಿಪ್ಸ್ ಮತ್ತು ಮಾಂಸದೂಟ ತಿನ್ನಲು ಬಿಡಲಿಲ್ಲ ಎಂಬ ವಿಚಿತ್ರ ಕಾರಣ ನೀಡಿ ಪತ್ನಿಯೊಬ್ಬಳು ತನ್ನ ಎನ್ಆರ್ಐ ಪತಿಯ ಮೇಲೆ ದಾಖಲಿಸಿದ್ದ ಕ್ರಿಮಿನಲ್...

ಇರಾನ್ ನಾಯಕರನ್ನು ಒಂದೇ ಹೊಡೆತಕ್ಕೆ ಹೊಸಕಿ ಹಾಕಬಹುದು- ಖಮೇನಿ ಅಂತ್ಯಕ್ರಿಯೆಯಲ್ಲಿ ಹರಿದ ಜನಸಾಗರ ಕಂಡು ಟ್ರಂಪ್ ಆಶ್ಚರ್ಯ: ಜನರ ಕಣ್ಣೀರು ನಕಲಿ ಎಂದ ಅಮೆರಿಕ ಅಧ್ಯಕ್ಷ

ಇರಾನ್ ನಾಯಕರನ್ನು ಒಂದೇ ಹೊಡೆತಕ್ಕೆ ಹೊಸಕಿ ಹಾಕಬಹುದು- ಖಮೇನಿ ಅಂತ್ಯಕ್ರಿಯೆಯಲ್ಲಿ ಹರಿದ ಜನಸಾಗರ ಕಂಡು ಟ್ರಂಪ್ ಆಶ್ಚರ್ಯ: ಜನರ ಕಣ್ಣೀರು ನಕಲಿ ಎಂದ ಅಮೆರಿಕ ಅಧ್ಯಕ್ಷ

by Shwetha
July 6, 2026
0

ವಾಷಿಂಗ್ಟನ್: ಇರಾನ್ ದೇಶದ ಉನ್ನತ ನಾಯಕತ್ವವನ್ನು ಕೇವಲ ಒಂದೇ ಒಂದು ದಾಳಿಯ ಮೂಲಕ ಸಂಪೂರ್ಣವಾಗಿ ನಾಶಪಡಿಸುವ ಸಾಮರ್ಥ್ಯ ಅಮೆರಿಕಕ್ಕಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಘಾತಕಾರಿ...

ಚಂದಾ ಚೋರಿ ಬಗ್ಗೆ ಚೌಕಿದಾರ ಮೌನವೇಕೆ: ಆರೆಸ್ಸೆಸ್ ನೋಂದಣಿಯಾದರೆ ಮಾತ್ರ ಚಂದಾ ಚೋರಿಗೆ ಬ್ರೇಕ್ ಸಾಧ್ಯ: ಪ್ರಿಯಾಂಕ್ ಖರ್ಗೆ

ಚಂದಾ ಚೋರಿ ಬಗ್ಗೆ ಚೌಕಿದಾರ ಮೌನವೇಕೆ: ಆರೆಸ್ಸೆಸ್ ನೋಂದಣಿಯಾದರೆ ಮಾತ್ರ ಚಂದಾ ಚೋರಿಗೆ ಬ್ರೇಕ್ ಸಾಧ್ಯ: ಪ್ರಿಯಾಂಕ್ ಖರ್ಗೆ

by Shwetha
July 6, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಅಧಿಕೃತವಾಗಿ ನೋಂದಣಿಯಾದರೆ ಮಾತ್ರ ಇಂತಹ ಅಕ್ರಮಗಳಿಗೆ ಮುಕ್ತಿ ಸಿಗುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪುನರುಚ್ಚರಿಸಿದ್ದಾರೆ. ಅಯೋಧ್ಯಾ ರಾಮಮಂದಿರದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram