ಸಂಚಾರ ಮುಕ್ತವಾಗದ ಚಾರ್ಮಾಡಿ ಘಾಟ್ : ಸ್ಥಳೀಯರ ಆಕ್ರೋಶ
ಚಿಕ್ಕಮಗಳೂರು : ಬರೋಬ್ಬರಿ ಎರಡು ವರ್ಷ ಕಳೆದರೂ ಚಾರ್ಮಾಡಿ ಘಾಟ್ ರಸ್ತೆ ದುರಸ್ತಿ ಆಗದೇ ಇರೋದು ಮಲೆನಾಡಿಗರ ಆಕ್ರೋಶಕ್ಕೆ ಕಾರಣವಾಗಿದೆ. 2019ರಲ್ಲಿ ಸುರಿದ ಮಳೆ ಮಲೆನಾಡು ಭಾಗದ ಜನರನ್ನು ಕಂಗಾಲು ಮಾಡಿತ್ತು. ಕರುಣೆ ಇಲ್ಲದಂತೆ ಸುರಿದ ಮಳೆಗೆ ಮಲೆನಾಡಿನ ಸೇತುವೆಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದಕ್ಕೆ ಲೆಕ್ಕವೇ ಇರಲಿಲ್ಲ. ರಸ್ತೆಗಳು ಮಳೆ ನೀರಲ್ಲಿ ಕೊಚ್ಚಿ ಹೋಗಿತ್ತು.
ಮುಖ್ಯವಾಗಿ ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ತೀವ್ರ ಕುಸಿತಕ್ಕೆ ಒಳಗಾಗಿ ರಸ್ತೆ ಸಂಚಾರಕ್ಕೆ ಅಡೆಚಣೆ ಉಂಟಾಗಿತ್ತು. ಈ ಮಾರ್ಗದ ಮೇಲೆ ಸಾಕಷ್ಟು ಮಂದಿ ಅವಲಂಭಿತರಾಗಿದ್ದು, ಆರೋಗ್ಯ ಸಂಬಂಧಿಸಿದಂತೆ ತುರ್ತು ಸಂದರ್ಭದಲ್ಲಿ ಮಂಗಳೂರು-ಉಡುಪಿ ಹೋಗಲು ಚಾರ್ಮಾಡಿ ಘಾಟ್ ಮೇಲೆ ಹೋಗಬೇಕಿತ್ತು. ಆದ್ರೆ 2019ರ ಆಗಸ್ಟ್ ನಲ್ಲಿ ಉರಿದ ಮಳೆಯಿಂದಾಗಿ ಚಾರ್ಮಾಡಿ ಘಾಟ್ ಕುಸಿದಿತ್ತು.
ಅಂದು ಸರ್ಕಾರ ಮೂರು ತಿಂಗಳಲ್ಲಿ ದುರಸ್ತಿ ಮಾಡುತ್ತೇವೆ ಎಂದಿತ್ತು. ಎರಡು ವರ್ಷವಾದರೂ ಚಾರ್ಮಾಡಿ ಘಾಟ್ ಸಂಚಾರ ಮುಕ್ತವಾಗಿಲ್ಲ. ಇದರಿಂದ ಮಲೆನಾಡಿನ ಜನರಿಗೆ ಸಂಕಷ್ಟ ಎದುರಾಗಿದೆ. ಮೂರೇ ತಿಂಗಳಲ್ಲಿ ಸಂಚಾರಮುಕ್ತ ಮಾಡುತ್ತೇವೆ ಎಂದಿದ್ದ ಸರ್ಕಾರ ಎರಡು ವರ್ಷವಾದರೂ ಕಾಮಗಾರಿ ಮುಗಿಸಿದೇ ಇರುವುದು ಜನರ ಕೆಂಗಣ್ಣಿಗೆ ಕಾರಣವಾಗಿದ್ದು, ಕೂಡಲೇ ರಸ್ತೆ ಕಾಮಗಾರಿಯನ್ನ ಪೂರ್ಣಗೊಳಿಸಿ ಚಾರ್ಮಾಡಿ ಘಾಟ್ ರಸ್ತೆಯನ್ನ ಸಂಚಾರ ಮುಕ್ತಗೊಳಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.










