ಶೇನ್ ವಾಟ್ಸನ್ ಇನ್ನು ಐಪಿಎಲ್ ನಿಂದ ದೂರ ಬಲೂದೂರ..!
ಶೇನ್ ವಾಟ್ಸನ್.. ವಿಶ್ವ ಕ್ರಿಕೆಟ್ ಕಂಡ ಅತ್ಯುತ್ತಮ ಆಲ್ ರೌಂಡರ್ ಗಳಲ್ಲಿ ಒಬ್ಬರು. ಆಸ್ಟ್ರೇಲಿಯನ್ ಕ್ರಿಕೆಟರ್ ಆಗಿರುವ ಶೇನ್ ವಾಟ್ಸನ್ ಅವರು 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು.
ಆನಂತರ ಶೇನ್ ವಾಟ್ಸನ್ ಹೆಚ್ಚು ಸುದ್ದಿ ಮಾಡಿದ್ದು ಐಪಿಎಲ್ ನಲ್ಲಿ.
ಐಪಿಎಲ್ ಟೂರ್ನಿಯ ಆರಂಭದಿಂದಲೇ ಫ್ರಾಂಚೈಸಿಗಳ ನೆಚ್ಚಿನ ಆಟಗಾರನಾಗಿರುವ ಶೇನ್ ವಾಟ್ಸನ್ ಮೊದಲ ಆವೃತ್ತಿಯಲ್ಲಿ ರಾಜಸ್ತಾನ ರಾಯಲ್ಸ್ ಪರ ಆಡಿದ್ದರು.
ಶೇನ್ ವಾರ್ನ್ ನಾಯಕತ್ವದಲ್ಲಿ ರಾಜಸ್ತಾನ ರಾಯಲ್ಸ್ ಚಾಂಪಿಯನ್ ಪಟ್ಟಕ್ಕೇರಿತ್ತು. ಆನಂತರ ಶೇನ್ ವಾಟ್ಸನ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವೂ ಆಡಿದ್ದರು.
2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ಶೇನ್ ವಾಟ್ಸನ್ ಅವರು ಫೈನಲ್ ನಲ್ಲಿ ಶತಕ ಸಿಡಿಸಿ ತಂಡದ ಗೆಲುವಿನ ರೂವಾರಿಯಾಗಿದ್ದರು.
ಕಳೆದ ಮೂರು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರನಾಗಿದ್ದ ಶೇನ್ ವಾಟ್ಸನ್ ಅವರು ಈಗ ಕ್ರಿಕೆಟ್ ನಿಂದ ದೂರ ಉಳಿಯಲು ನಿರ್ಧಾರ ಮಾಡಿದ್ದಾರೆ.
ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಶೇನ್ ವಾಟ್ಸನ್ ಅವರು 472 ರನ್ ಹಾಗೂ 17 ವಿಕೆಟ್ ಗಳನ್ನು ಉರುಳಿಸಿದ್ದರು.
ಇನ್ನು 2018ರಲ್ಲಿ ಶೇನ್ ವಾಟ್ಸನ್ ಅವರು ಸಿಎಸ್ ಕೆ ಪರ 555 ರನ್ ಹಾಗೂ ಆರು ವಿಕೆಟ್ ಗಳನ್ನು ಪಡೆದುಕೊಂಡಿದ್ದರು.
ಹಾಗೇ 2020ರ ಐಪಿಎಲ್ ನಲ್ಲಿ ಶೇನ್ ವಾಟ್ಸನ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ. ಆದ್ರೂ ಚೆನ್ನೈ ತಂಡದ ಪರ 299 ರನ್ ಗಳಿಸಿದ್ದರು.
ಇದೀಗ ತನ್ನ ಕುಟುಂಬದ ಜೊತೆ ಕಾಲ ಕಳೆಯುವ ನಿರ್ಧಾರ ಮಾಡಿದ್ದಾರೆ. ತನ್ನ ಕ್ರಿಕೆಟ್ ಬದುಕಿಗೆ ನೆರವು ನೀಡಿದ್ದ ತಂಗಿ ಹಾಗೂ ಪತ್ನಿಯನ್ನು ಇದೇ ವೇಳೆ ಶೇನ್ ವಾಟ್ಸನ್ ಅವರು ಸ್ಮರಿಸಿಕೊಂಡಿದ್ದಾರೆ.
ಅದೇ ರೀತಿ ಕ್ರಿಕೆಟ್ ಬದುಕಿನಲ್ಲಿ ಅನೇಕ ಏರಿಳಿತಗಳನ್ನು ಕಂಡಿರುವ ಶೇನ್ ವಾಟ್ಸನ್, ಕೋಚ್, ಮೆಂಟರ್, ಆಸ್ಟ್ರೇಲಿಯನ್ ಆಟಗಾರರು ಮತ್ತು ಐಪಿಎಲ್ ಆಟಗಾರರಿಗೂ ಧನ್ಯವಾದಗಳನ್ನು ಹೇಳಿದ್ದಾರೆ.
ಒಟ್ಟಿನಲ್ಲಿ ಶೇನ್ ವಾಟ್ಸನ್ ಐಪಿಎಲ್ ನಲ್ಲಿ ತಂಡದ ಅಪತ್ಬಾಂಧವನಾಗಿ ಬ್ಯಾಟ್ ಮತ್ತು ಬೌಲಿಂಗ್ ನಲ್ಲಿ ನೆರವಾಗುತ್ತಿದ್ದರು.








