ಆಸೀಸ್ ವಿರುದ್ಧ ಸಚಿನ್, ಲಕ್ಷ್ಮಣ್, ದ್ರಾವಿಡ್ ಸಾಧನೆ ಮರೆಯೋಕೆ ಆಗುತ್ತಾ…!
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 17ರಿಂದ ಶುರುವಾಗಲಿದೆ. ನಾಲ್ಕು ಟೆಸ್ಟ್ ಪಂದ್ಯಗಳ ಮೊದಲ ಟೆಸ್ಟ್ ಪಂದ್ಯ ಆಡಿಲೇಡ್ ನಲ್ಲಿ ನಡೆಯಲಿದೆ. ಮೊದಲ ಟೆಸ್ಟ್ ಪಂದ್ಯ ಪಿಂಕ್ ಬಾಲ್ ನಲ್ಲಿ ಹೊನಲು ಬೆಳಕಿನಡಿಯಲ್ಲಿ ನಡೆಯಲಿದೆ.
ಅದೇ ರೀತಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಮಾತ್ರ ಆಡಲಿದ್ದಾರೆ. ಇನ್ನುಳಿದ ಟೆಸ್ಟ್ ಪಂದ್ಯಗಳಿಗೆ ಅಜ್ಯಂಕ್ಯಾ ರಹಾನೆ ಅವರು ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.
ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಪಂದ್ಯ ಅಂದ್ರೆ ಸಾಕಷ್ಟು ರೋಚಕವಾಗಿರುತ್ತದೆ. ಜಿದ್ದಾಜಿದ್ದಿನ ಸರಣಿಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಟೀಮ್ ಇಂಡಿಯಾ ಕೂಡ ಶ್ರೇಷ್ಠ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಉಭಯ ತಂಡಗಳ ಆಟಗಾರರಿಗೆ ಪ್ರತಿಷ್ಠೆಯ ಕದನವಾಗಿದೆ.
ಮತ್ತೊಂದೆಡೆ ಇಂಡೋ ಆಸೀಸ್ ಸರಣಿಯ ಅಂಕಿ ಅಂಶಗಳನ್ನು ಪರಿಗಣಿಸುವುದಾದ್ರೆ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾದ ಮಾಜಿ ಹುಲಿಗಳು ಘರ್ಜನೆ ಮಾಡಿದ್ದಾರೆ.
ಈ ಹಿಂದೆ ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್ ಅವರ ಆಸ್ಟ್ರೇಲಿಯಾ ತಂಡಕ್ಕೆ ಸವಾಲಾಗಿ ನಿಂತಿದ್ದಾರೆ ಎಂಬುದನ್ನು ಅಂಕಿ ಅಂಶಗಳೇ ಹೇಳುತ್ತವೆ.
ಹಾಗೇ ಆಸ್ಟ್ರೇಲಿಯಾದ ಮಾಜಿ ನಾಯಕರಾದ ರಿಕಿ ಪಾಂಟಿಂಗ್ ಹಾಗೂ ಮೈಕೆಲ್ ಕ್ಲಾರ್ಕ್ ಟೀಮ್ ಇಂಡಿಯಾದ ವಿರುದ್ಧ ಶ್ರೇಷ್ಠ ಮಟ್ಟದ ಪ್ರದರ್ಶನ ನೀಡಿದ್ದಾರೆ.
ಸಚಿನ್ ತೆಂಡುಲ್ಕರ್
ಆಸ್ಟ್ರೇಲಿಯಾ ವಿರುದ್ಧ 3630 ರನ್ ದಾಖಲಿಸಿರುವ ವಿಶ್ವದ ಏಕೈಕ ಬ್ಯಾಟ್ಸ್ ಮೆನ್ ಸಚಿನ್ ತೆಂಡುಲ್ಕರ್. 55 ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಸಚಿನ್ ತೆಂಡುಲ್ಕರ್ 11 ಶತಕಗಳನ್ನು ಸಿಡಿಸಿದ್ದಾರೆ. 2004ರಲ್ಲಿ ಸಿಡ್ನಿಯಲ್ಲಿ ಅಜೇಯ 241 ರನ್ ದಾಖಲಿಸಿರುವುದು ಗರಿಷ್ಠ ಸಾಧನೆಯಾಗಿದೆ.
ರಿಕಿ ಪಾಂಟಿಂಗ್
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಶ್ರೇಷ್ಠ ನಾಯಕ. ಭಾರತ ವಿರುದ್ಧ 29 ಟೆಸ್ಟ್ ಪಂದ್ಯಗಳನ್ನು ಆಡಿರುವ ಪಾಂಟಿಂಗ್ 2555 ರನ್ ಪೇರಿಸಿದ್ದಾರೆ. ಸರಾಸರಿ 54.36. ಇನ್ನು ಎಂಟು ಶತಕಗಳನ್ನು ದಾಖಲಿಸಿದ್ದಾರೆ. 257 ರನ್ ಗರಿಷ್ಠ ರನ್. ಭಾರತದ ವಿರುದ್ಧ ನಾಯಕನಾಗಿ ಆಸ್ಟ್ರೇಲಿಯಾ ನೆಲದಲ್ಲಿ ಆಡಿರುವ 11 ಪಂದ್ಯಗಳಲ್ಲಿ ಪಾಂಟಿಂಗ್ ಗೆದ್ದಿರುವುದು ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ.
ವಿವಿಎಸ್ ಲಕ್ಷ್ಮಣ್
ಆಸ್ಟ್ರೇಲಿಯಾ ಕ್ರಿಕೆಟ್ ತಂಡ ವಿವಿಎಸ್ ಲಕ್ಷ್ಮಣ್ ಅವರನ್ನು ಯಾವತ್ತೂ ಮರೆಯುವುದಿಲ್ಲ. ಆಸೀಸ್ ಬೌಲರ್ ಗಳಿಗೆ ಲಕ್ಷ್ಮಣ್ ಲಕ್ಷ್ಮಣ ರೇಖೆಯಾಗಿದ್ದರು. ಆಸ್ಟ್ರೇಲಿಯಾ ವಿರುದ್ಧ ಲಕ್ಷ್ಮಣ್ ದಾಖಲಿಸಿದ್ದ ರನ್ 2434. ಇದ್ರಲ್ಲಿ ಆರು ಶತಕ ಹಾಗೂ 12 ಅರ್ಧಶತಕಗಳಿವೆ. ಸರಾಸರಿ 49.67. ಕೊಲ್ಕತ್ತಾದಲ್ಲಿ ದಾಖಲಿಸಿದ್ದ 281 ರನ್ ಕ್ರಿಕೆಟ್ ಇತಿಹಾಸದ ಅತ್ಯಂತ ಶ್ರೇಷ್ಠ ಇನಿಂಗ್ಸ್ ಗಳಲ್ಲಿ ಒಂದಾಗಿದೆ.
ರಾಹುಲ್ ದ್ರಾವಿಡ್
ಟೀಮ್ ಇಂಡಿಯಾದ ಮಹಾ ಗೋಡೆ. ರಾಹುಲ್ ದ್ರಾವಿಡ್ ಆಸ್ಟ್ರೇಲಿಯಾ ವಿರುದ್ಧ 2143 ರನ್ ದಾಖಲಿಸಿದ್ದಾರೆ. ಆದ್ರೆ ಆಸ್ಟ್ರೇಲಿಯಾ ವಿರುದ್ಧ ದ್ರಾವಿಡ್ ಅಷ್ಟೊಂದು ಯಶ ಸಾಧಿಸಿರಲಿಲ್ಲ. 39.68ರ ಸರಾಸರಿಯಲ್ಲಿ ದ್ರಾವಿಡ್ ರನ್ ಪೇರಿಸಿದ್ದಾರೆ. ಐತಿಹಾಸಿಕ ಕೊಲ್ಕತ್ತಾ ಟೆಸ್ಟ್ ಪಂದ್ಯದಲ್ಲಿ ಲಕ್ಷ್ಮಣ್ ಜೊತೆ ದ್ರಾವಿಡ್ ಇನಿಂಗ್ಸ್ ಕಟ್ಟಿದ್ದ ರೀತಿ ಸದಾ ನೆನಪಿನಲ್ಲಿ ಉಳಿಯುವಂತಿದೆ. 2011-12ರ ಸರಣಿಯಲ್ಲಿ ದ್ರಾವಿಡ್ ಎಂಟು ಇನಿಂಗ್ಸ್ ಗಳಲ್ಲಿ 194 ರನ್ ಪೇರಿಸಿದ್ದರು. ಬಳಿಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ದ್ರಾವಿಡ್ ಆಸ್ಟ್ರೇಲಿಯಾ ವಿರುದ್ಧ ಎರಡು ಪಂದ್ಯಗಳಿಗೆ ಟೀಮ್ ಇಂಡಿಯಾವನ್ನು ಮುನ್ನೆಡೆಸಿದ್ದರು.
ಮೈಕೆಲ್ ಕ್ಲಾಕ್
ಟೀಮ್ ಇಂಡಿಯಾ ವಿರುದ್ಧ ಬೆಂಗಳೂರಿನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದಲ್ಲದೆ ಶತಕವನ್ನು ದಾಖಲಿಸಿದ್ದರು. ಭಾರತದ ವಿರುದ್ಧ ಮೈಕೆಲ್ ಕ್ಲಾರ್ಕ್ ಅವರು 53.92ರ ಸರಾಸರಿಯಲ್ಲಿ 2049 ರನ್ ಪೇರಿಸಿದ್ದಾರೆ. 22 ಪಂದ್ಯಗಳನ್ನು ಆಡಿರುವ ಮೈಕೆಲ್ ಕ್ಲಾರ್ಕ್ ತ್ರಿಪಲ್ ಶತಕ ಸೇರಿ ಒಟ್ಟು ಏಳು ಶತಕಗಳನ್ನು ದಾಖಲಿಸಿದ್ದಾರೆ. 2011-12ರ ಟೆಸ್ಟ್ ಸರಣಿಯಲ್ಲಿ ಕ್ಲಾರ್ಕ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಕ್ಲಾಕ್ ಸಾರಥ್ಯದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.








