ಬೆಂಗಳೂರು: ಒಂದು ಕೈಯಲ್ಲಿ ಉಚಿತ ಯೋಜನೆಗಳ ಆಮಿಷ, ಮತ್ತೊಂದು ಕೈಯಲ್ಲಿ ಅಗತ್ಯ ಸೇವೆಗಳ ದರ ಏರಿಕೆ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿ, ಬಸ್ ಪ್ರಯಾಣ ದರ ಏರಿಕೆ ನಿರ್ಧಾರದ ವಿರುದ್ಧ ಬಿಜೆಪಿ ವತಿಯಿಂದ ಬೆಂಗಳೂರಿನ ಮೆಜೆಸ್ಟಿಕ್ನ ನಾಡಪ್ರಭು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಉಚಿತ ಯೋಜನೆಗಳ ಹೆಸರಿನಲ್ಲಿ ಜನರನ್ನು ಸೆಳೆಯುವ ಸರ್ಕಾರ, ಮತ್ತೊಂದೆಡೆ ಬಸ್ ಪ್ರಯಾಣ ದರ ಹೆಚ್ಚಿಸುವ ಮೂಲಕ ನಿತ್ಯ ಪ್ರಯಾಣಿಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹೇರುತ್ತಿದೆ. ಸರ್ಕಾರದ ಈ ನಿರ್ಧಾರದಿಂದ ಕಾರ್ಮಿಕರು, ವಿದ್ಯಾರ್ಥಿಗಳು, ಮಧ್ಯಮ ವರ್ಗದ ಕುಟುಂಬಗಳು ಸೇರಿದಂತೆ ಪ್ರತಿನಿತ್ಯ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಪ್ರಯಾಣ ದರ ಹೆಚ್ಚಳ ಮತ್ತಷ್ಟು ಹೊರೆಯಾಗಲಿದೆ. ಜನರ ಬದುಕು ಸುಗಮಗೊಳಿಸಬೇಕಾದ ಸರ್ಕಾರವೇ ಅವರ ದೈನಂದಿನ ಜೀವನವನ್ನು ದುಬಾರಿಗೊಳಿಸುತ್ತಿರುವುದು ವಿಪರ್ಯಾಸ. ಕಾಂಗ್ರೆಸ್ನ ಗ್ಯಾರಂಟಿ ಆಡಳಿತದ ಹೆಸರಿನಲ್ಲಿ ಜನರ ಮೇಲೆ ಹೆಚ್ಚುವರಿ ಹೊರೆ ಹೊರಿಸಲಾಗುತ್ತಿದೆ ಎಂದು ಬಿಜೆಪಿ ಮುಖಂಡರು ಟೀಕಿಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಬಸ್ ಪ್ರಯಾಣಿಕರಿಗೆ ಗುಲಾಬಿ ಹೂಗಳನ್ನು ವಿತರಿಸುವ ಮೂಲಕ ಸರ್ಕಾರದ ದರ ಏರಿಕೆ ನಿರ್ಧಾರದ ವಿರುದ್ಧ ಜನಜಾಗೃತಿ ಮೂಡಿಸಲಾಯಿತು. ದರ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಜನಸಾಮಾನ್ಯರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಚಲವಾದಿ ನಾರಾಯಣಸ್ವಾಮಿ, ಸಂಸದ ಪಿ.ಸಿ. ಮೋಹನ್, ಶಾಸಕರಾದ ಅರವಿಂದ್ ಬೆಲ್ಲದ್, ಎಲ್.ಎ. ರವಿಸುಬ್ರಹ್ಮಣ್ಯ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಉಚಿತ ಯೋಜನೆಗಳ ಭರವಸೆ ನೀಡಿ, ಜನರ ದೈನಂದಿನ ಬದುಕಿನ ಮೇಲೆಯೇ ದರ ಏರಿಕೆಯ ಹೊರೆ ಹೇರುವುದು ಯಾವ ರೀತಿಯ ಜನಪರ ಆಡಳಿತ? ಬಸ್ ಪ್ರಯಾಣ ದರ ಏರಿಕೆ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು ಎಂಬುದು ಬಿಜೆಪಿಯ ಆಗ್ರಹವಾಗಿದೆ.




