ಧಾರವಾಡ: ಇಲ್ಲಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಚೇರಿಯಲ್ಲಿ 1.24 ಕೋಟಿ ರೂ. ಹಣವನ್ನು ಖದೀಮರು ಎಗರಿಸಿರುವ ಘಟನೆ ನಡೆದಿದೆ.
ಧಾರವಾಡದ ರಾಯಾಪುರ ಬಡಾವಣೆಯಲ್ಲಿನ ಧರ್ಮಸ್ಥಳ ಗ್ರಾಮಾಭಿವದ್ಧಿ ಸಂಘದ (SKDRDP) ಕಚೇರಿಯ ಲಾಕರ್ ಲೂಟಿ ಮಾಡಿದ್ದಾರೆ. 1 ಕೋಟಿ 24 ಲಕ್ಷ ರೂ. ಹಣ ಎಗರಿಸಿದ್ದಾರೆ. ಒಟ್ಟು ನಾಲ್ಕೂ ಲಾಕರ್ ಗಳನ್ನು ಮುರಿದಿರುವ ಕಳ್ಳರು, ಎಲ್ಲವನ್ನೂ ದೋಚಿ ಪರಾರಿಯಾಗಿದ್ದಾರೆ.
ಸೆಕ್ಯೂರಿಟಿ ಗಾರ್ಡ್ಗಳು ಊಟಕ್ಕೆ ಹೋದ ಸಂದರ್ಭದಲ್ಲಿ ಕಚೇರಿಯ ಶೌಚಾಲಯದ ಕಿಟಕಿ ಮುರಿದು ಒಳನುಗ್ಗಿದ ಖದೀಮರು, ಸಿಸಿ ಟಿವಿ ಕ್ಯಾಮೆರಾ ಇಲ್ಲದ ಭಾಗದಿಂದ ಬಂದು ಕಳ್ಳತನ ಮಾಡಿರುವುದು ಹಲವು ಅನುಮಾನ ಮೂಡಿಸಿದೆ.
ಜಿಲ್ಲೆಯಾದ್ಯಂತ ನಿತ್ಯವೂ ಸಂಗ್ರಹವಾಗುತ್ತಿದ್ದ ಹಣ ಅದೇ ದಿನ ಬ್ಯಾಂಕ್ಗೆ ಡೆಪಾಸಿಟ್ ಆಗುತ್ತಿತ್ತು. ಆದರೆ ರಜೆ ಇದ್ದ ಹಿನ್ನೆಲೆಯಲ್ಲಿ ಮಂಗಳವಾರ ಹಣವನ್ನು ಕಟ್ಟಲಾಗಿರಲಿಲ್ಲ. ಹೀಗಾಗಿ ಕಚೇರಿಯಲ್ಲಿನ ಲಾಕರ್ ನಲ್ಲಿಯೇ ಇಡಲಾಗಿತ್ತು. ಇದನ್ನೆಲ್ಲ ತಿಳಿದುಕೊಂಡವರೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕಚೇರಿಯ ಸಿಬ್ಬಂದಿ ಸೇರಿದಂತೆ ಪೊಲೀಸರು ತನಿಖೆ ನಡೆಸಿದ್ದಾರೆ.