1.5 ಲಕ್ಷ ರೂ. ಮೌಲ್ಯದ ಮಂಗಳಸೂತ್ರವನ್ನು ಎಮ್ಮೆಯೊಂದು ನುಂಗಿರುವ ಘಟನೆ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ನಡೆದಿದೆ.
ರೈತ ರಾಮಹರಿ ಅವರ ಪತ್ನಿ ಸ್ನಾನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಸೋಯಾಬೀನ್, ಶೇಂಗಾ ಚಿಪ್ಪು ತುಂಬಿದ್ದ ತಟ್ಟೆಯಲ್ಲಿ ಮಂಗಳಸೂತ್ರ ಬಿಚ್ಚಿಟ್ಟಿದ್ದರು. ಇದನ್ನು ಗಮನಿಸದ ರಾಮಹರಿಯ ಪತ್ನಿ ಅಕಸ್ಮಾತ್ ಅದೇ ತಟ್ಟೆಯನ್ನು ಎಮ್ಮೆಯ ಮುಂದೆ ತಿನ್ನಲು ಇಟ್ಟಿದ್ದರು. ಆ ನಂತರ ಅವರು ಮನೆಗೆಲಸದಲ್ಲಿ ತೊಡಗಿದ್ದರು.
ಸ್ವಲ್ಪ ಸಮಯದ ನಂತರ, ಅವರ ಮಂಗಳಸೂತ್ರ ಕಾಣೆಯಾಗಿರುವ ಕುರಿತು ತಿಳಿದಿದೆ. ಹುಡುಕಾಟದ ನಂತರ, ಅವರು ಎಮ್ಮೆಗೆ ತಿನ್ನಲು ಕೊಟ್ಟ ಆಹಾರದಲ್ಲಿ ಮಂಗಳಸೂತ್ರವನ್ನು ಇಟ್ಟಿದ್ದನ್ನು ನೆನಪಿಸಿಕೊಂಡರು. ತಕ್ಷಣ ಎಮ್ಮೆ ಬಳಿ ಹೋಗಿದ್ದಾರೆ. ತಟ್ಟೆ ಖಾಲಿಯಾಗಿತ್ತು. ಕೂಡಲೇ ಪಶುವೈದ್ಯಾಧಿಕಾರಿ ಬಾಳಾಸಾಹೇಬ್ ಕೌಂಡನೆ ಅವರಿಗೆ ಕರೆ ಮಾಡಿದ್ದಾರೆ. ಕೂಡಲೇ ಎಮ್ಮೆಯ ಹೊಟ್ಟೆ ಪರಿಶೀಲನೆ ನಡೆಸಿದಾಗ ಅಲ್ಲಿ ಇರುವುದು ಗೊತ್ತಾಗಿದೆ. ನಂತರ ಎಮ್ಮೆಯ ಹೊಟ್ಟೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಬಳಿಕ ಪ್ರಾಣಿಯ ಹೊಟ್ಟೆಯಿಂದ ಚಿನ್ನದ ಸರ ತೆಗೆಯಲಾಗಿದೆ.