ಬೆಂಗಳೂರು : ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ ಮರಣಮೃದಂಗ ಬಾರಿಸುತ್ತಿದ್ದು, ಕೊರೊನಾಸುರನ ಹೊಡೆತಕ್ಕೆ ಕೋಟ್ಯಾಂತರ ಜನರ ಬದುಕು ಬರ್ಬಾದ್ ಆಗಿದೆ. ಈ ಹೆಮ್ಮಾರಿ ವಿರುದ್ಧ ಹೋರಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಧನ ಸಹಾಯ ಕೋರಿದ್ದು, ಚಿಕ್ಕಬಳ್ಳಾಪುರ ಸಂಸದ ಬಿ.ಎನ್. ಬಚ್ಚೇಗೌಡ ಕೊರೊನಾ ವಿರುದ್ಧ ಹೋರಾಟಕ್ಕೆ ಆರ್ಥಿಕ ನೆರವು ನೀಡಿದ್ದಾರೆ. ಕೊರೊನಾ ಸಂಬಂಧ ಪರಿಹಾರಕ್ಕಾಗಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 1 ಕೋಟಿ ರೂಪಾಯಿ ಹಣ ಹಾಗೂ ತಮ್ಮ ಒಂದು ತಿಂಗಳ ವೇತನವನ್ನು ಪ್ರಧಾನಿಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಚ್ಚೇಗೌಡ, ಸಾಂಕ್ರಾಮಿಕ ಕೊರೊನಾ ರೋಗ ಪರಿಹಾರ ಕೆಲಸಗಳಿಗಾಗಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಒಂದು ಕೋಟಿ ರೂಪಾಯಿ ಹಾಗೂ ನನ್ನ ಒಂದು ತಿಂಗಳ ವೇತನವನ್ನು ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಗೆ ನೀಡಿದ್ದೇನೆ. ಎಲ್ಲರೂ ಒಟ್ಟಾಗಿ ಕೊರೊನಾ ಮಹಾಮಾರಿಯನ್ನು ಹಿಮ್ಮೆಟ್ಟಿಸೋಣ ಎಂದು ಕರೆಕೊಟ್ಟಿದ್ದಾರೆ.








