ನವದೆಹಲಿ: ಬಡವರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರಿ ಭಾರತ್ ಬ್ರ್ಯಾಂಡ್ ಹೆಸರಿನಡಿ ಕೇವಲ 29 ರೂ.ಗೆ ಅಕ್ಕಿ ಮಾರಾಟ ಮಾಡಲು ಮುಂದಾಗಿದೆ.
ಕೇಂದ್ರ ಸರ್ಕಾರದಿಂದಲೇ ನೇರವಾಗಿ ಪ್ರತಿ ಕೆಜಿಗೆ 29 ರೂ.ನಂತೆ ಅಕ್ಕಿ ಮಾರಾಟ ಮಾಡಲಾಗುತ್ತದೆ. ಸಗಟು ಖರೀದಿದಾರರು ತಮ್ಮ ಹತ್ತಿರ ಹೊಂದಿರುವ ಅಕ್ಕಿ ಸಂಗ್ರಹದ ಪ್ರಮಾಣ ಬಹಿರಂಗಪಡಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಆಹಾರ ಇಲಾಖೆಯ ಕಾರ್ಯದರ್ಶಿ ಸಂಜೀವ್ ಚೋಪ್ರಾ (Sanjeev Chopra) ಈ ಕುರಿತು ಮಾಹಿತಿ ನೀಡಿದ್ದು, ಒಂದು ವರ್ಷದಲ್ಲಿ ಚಿಲ್ಲರೆ ಮತ್ತು ಸಗಟು ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಶೇ.15ರಷ್ಟು ಹೆಚ್ಚಳವಾಗಿದೆ. ವಿವಿಧ ಮಾದರಿಯ ಅಕ್ಕಿ ರಫ್ತಿನ ಮೇಲೆ ನಿಯಂತ್ರಣ ಹೇರಿದ್ದರೂ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಮುಂದಿನ ವಾರದಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವೇ ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 29 ರೂ. ನಂತೆ ಅಕ್ಕಿ ಮಾರಾಟ ಮಾಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಈಗಾಗಲೇ ʻಭಾರತ್ ಬ್ರ್ಯಾಂಡ್ʼ ಗೋದಿ ಹಿಟ್ಟು ಮತ್ತು ಕಡಲೆ ಬೇಳೆ ಮಾರಾಟ ಮಾಡುತ್ತಿದೆ. ಗೋದಿ ಹಿಟ್ಟು ಪ್ರತಿ ಕೆ.ಜಿಗೆ 27.50 ರೂ. ಕಡಲೆ ಬೇಳೆ ಪ್ರತಿ ಕೆ.ಜಿಗೆ 60 ರೂ.ಗಳಿಗೆ ಮಾರಾಟವಾಗುತ್ತಿದೆ. ಇನ್ನು ಮುಂದೆ ಈ ಸಾಲಿಗೆ ಅಕ್ಕಿ ಸೇರಲಿದ್ದು, 5 ಕೆಜಿ ಹಾಗೂ 10 ಕೆಜಿ ಪ್ಯಾಕೆಟ್ ಮೂಲಕ ಜನರಿಗೆ ದೊರೆಯಲಿದೆ.