ಕಿರುತೆರೆ ‘ರಾಮಾಯಣ’ದ ರಾವಣ  ಇನ್ನಿಲ್ಲ

1 min read

ಕಿರುತೆರೆ ‘ರಾಮಾಯಣ’ದ ರಾವಣ  ಇನ್ನಿಲ್ಲ

(82) ನಟ ಅರವಿಂದ ತ್ರಿವೇದಿ ವಿಧಿವಶ

ವಯೋಸಹಜ ಕಾಯಿಲೆಯಿಂದ ನಿಧನ

ಕಿರುತೆರೆ ರಾಮಾಯಣದ ರಾವಣನಾಗಿ ಬಣ್ಣಹಚ್ಚಿ ಖ್ಯಾತಿ ಗಳಿಸಿದ್ದ ಅರವಿಂದ ತ್ರಿವೇದಿ ಅವರು ವಿಧಿವಶರಾಗಿದ್ದಾರೆ. ರಾತ್ರಿ ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.  ಇನ್ನೂ ಅರವಿಂದ್ ತ್ರಿವೇದಿ ಅವರ ಸಾವಿನ ಬಗ್ಗೆ ಹಲವು ಬಾರಿ ಸುಳ್ಳು ವದಂತಿಗಳು ಹರಿದಾಡಿದ್ದವು. 2019ರಲ್ಲಿ ಅರವಿಂದ ತ್ರಿವೇದಿ ಸಾವಿನ ವದಂತಿ ಬೆಂಕಿಯಂತೆ ಹಬ್ಬಿತ್ತು. ನಂತರ ಈ ವದಂತಿಗಳಿಗೆ ಅರವಿಂದ್  ಅವರ ಸೋದರಳಿಯ ಕೌಸ್ತುಭ್ ತ್ರಿವೇದಿ ಅವರು ಟ್ವಿಟರ್‌ ನಲ್ಲಿ ಸ್ಪಷ್ಟನೆ ನೀಡಿ , ಇವೆಲ್ಲಾ ಸುಳ್ಳು ಎಂದಿದ್ದರು.

ಕಳೆದ ವರ್ಷ ಅರವಿಂದ್ ತ್ರಿವೇದಿ ಸಾವಿನ ವದಂತಿಯು ಮತ್ತೊಮ್ಮೆ ಹರಡಿತ್ತು. ಆ ವೇಳೆ ‘ರಾಮಾಯಣ’ ಧಾರಾವಾಹಿಯಲ್ಲಿ ಲಕ್ಷ್ಮಣನ ಪಾತ್ರದಲ್ಲಿ ನಟಿಸಿದ್ದ ಸುನಿಲ್ ಲಹರಿ ಇವೆಲ್ಲಾ ಸುಳ್ಳು ವದಂತಿಗಳು ಎಂದು ಖಚಿತಪಡಿಸಿದ್ದರು. ಅರವಿಂದ್ ತ್ರಿವೇದಿ, ಮೂಲತಃ ಮಧ್ಯಪ್ರದೇಶದವರಾಗಿದ್ದು, ತಮ್ಮ ವೃತ್ತಿಜೀವನವನ್ನು ‘ಪರಾಯ ಧನ್’ ಚಿತ್ರದ ಮೂಲಕ ಆರಂಭಿಸಿದರು. ಇದಾದ ನಂತರ, ಕೆಲವು ಹಿಂದಿ ಚಿತ್ರಗಳನ್ನು ಹೊರತುಪಡಿಸಿ, ಅವರು ಅನೇಕ ಗುಜರಾತಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಅರವಿಂದ ತ್ರಿವೇದಿ ಸುಮಾರು 300 ಚಿತ್ರಗಳಲ್ಲಿ ನಟಿಸಿದ್ದಾರೆ. ‘ರಾಮಾಯಣ’ದ ಹೊರತಾಗಿ, ಟಿವಿ ಶೋ ‘ವಿಕ್ರಮ ಮತ್ತು ಬೇತಾಳ’ದಲ್ಲಿಯೂ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಗುಜರಾತಿ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಅವರು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಟನೆಯ ಹೊರತಾಗಿ ಅರವಿಂದ್ ತ್ರಿವೇದಿ ಅವರು ರಾಜಕೀಯದಲ್ಲಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. 1991 ರಲ್ಲಿ, ಅವರು ಗುಜರಾತ್‌ನ ಸಬರಕಾಂತ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಗೆದ್ದು  ಸಂಸತ್  ಸೇರಿದ್ದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd