ಕೃಪೆ – ಹಿಂಡವಿ
ಸಾಹಿತ್ಯ ಸರ್ಕಲ್:
ಹಳ್ಳಿಯಲಿ ಕಟ್ಟಿದ ದಿಲ್ಲಿಯಲಿ ಕುಟ್ಟಿದ ಕನ್ನಡ ಸಾಹಿತ್ಯದ ಚುಟುಕು ಬ್ರಹ್ಮ ದಿನಕರ ಸ್ಮರಣೆ:
ಚುಟುಕು ಬ್ರಹ್ಮ, ಚೌಪದಿ ಹರಿಕಾರ ದಿನಕರ ದೇಸಾಯಿಯವರ ಜೀವಿತ ಕಾಲ 1909 -1982. ದಿನಕರ್ ದೇಸಾಯಿ ಕವಿಯಾಗಿ ಸಾಹಿತ್ಯಾಸಕ್ತರಲ್ಲಿ ಹೆಸರಾಗಿದ್ದರೂ ಅದು ಅವರ ಅನೇಕ ಚಟುವಟಿಕೆಗಳ ಒಂದು ಆಯಾಮ ಮಾತ್ರ. ಕವಿ ವಿ.ಜಿ. ಭಟ್ಟರು ತಮ್ಮ ಒಂದು ಕವಿತೆಯಲ್ಲಿ ‘ಹಳ್ಳಿಯಲಿ ಕಟ್ಟುವನು/ದಿಲ್ಲಿಯಲಿ ಕುಟ್ಟುವನು’ ಎಂದು ದಿನಕರರನ್ನು ವರ್ಣಿಸಿದ್ದಾರೆ. ಕುಟ್ಟು ಎನ್ನುವುದು ವಿನಾಶ ಗೈಯುವುದು ಎಂಬ ನೇತ್ಯಾತ್ಮಕ ಅರ್ಥದಲ್ಲಿ ಇಲ್ಲಿ ಬಳಕೆಯಾಗದೆ ಹಕ್ಕೊತ್ತಾಯ ಮಾಡು ಎಂಬರ್ಥದಲ್ಲಿ ಬಳಕೆಯಾಗುತ್ತದೆ (ಸಭೆಗಳಲ್ಲಿ ತಮ್ಮ ಅಭಿಪ್ರಾಯವನ್ನು ಬಲವಾಗಿ ಮಂಡಿಸುವಾಗ ಮೇಜು ಕುಟ್ಟಿ ಮಾತಾಡುವ ರೂಢಿ ಇದ್ದುದನ್ನು ನೆನಪಿಸಿಕೊಂಡರೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ).
ಒಂದು ಅವಧಿಗೆ ಸಂಸದರಾಗಿ ಆಯ್ಕೆಯಾಗಿ ಕೆಲಸ ಮಾಡುತ್ತಿದ್ದಾಗ ಪಾರ್ಲಿಮೆಂಟಿನಲ್ಲಿ ಅವರು ಪರಿಣಾಮಕಾರಿಯಾಗಿ ತಮ್ಮ ಕಾರ್ಯ ನಿಭಾಯಿಸಿದ ಪರಿಯನ್ನು ‘ದಿಲ್ಲಿಯಲಿ ಕುಟ್ಟುವನು’ ಎಂಬ ಸಾಲು ಸಮರ್ಥವಾಗಿ ವಿವರಿಸುತ್ತದೆ. ಇನ್ನು ಅವರು ತಮ್ಮ ಜಿಲ್ಲೆಯಲ್ಲಿ, ಅದೂ ಹಳ್ಳಿಗಾಡಿನಲ್ಲಿ ಹತ್ತಾರು ಶಾಲಾ ಕಾಲೇಜುಗಳನ್ನು ಕಟ್ಟುವ ಮೂಲಕ ಸಮಾಜ ಕಟ್ಟುವ ಮಹತ್ಕಾರ್ಯವನ್ನು ಮಾಡಿದ್ದಾರೆ. 1953ರಲ್ಲಿ ಅವರು ಸ್ಥಾಪಿಸಿದ ‘ಕೆನರಾ ವೆಲ್‍ಫ್ಯಾರ್ ಟ್ರಸ್ಟ್’ ಉತ್ತರ ಕನ್ನಡ ಜಿಲ್ಲೆಯಲ್ಲಿ 10 ಪ್ರಾಥಮಿಕ ಶಾಲೆಗಳು, 16 ಹೈಸ್ಕೂಲುಗಳು, 10 ಕಾಲೇಜುಗಳು ಹಾಗೂ 6 ಇತರ ತರಬೇತಿ ಮತ್ತು ಸಮಾಜ ಸೇವಾ ಸಂಸ್ಥೆಗಳನ್ನು ನಡೆಸುತ್ತಿದೆ. ಇವುಗಳಲ್ಲಿ ಬಹುತೇಕ ದಿನಕರರ ಜೀವಿತ ಕಾಲದಲ್ಲಿಯೇ ಸ್ಥಾಪಿತವಾದವಾಗಿವೆ.
ಇವೆಲ್ಲ ಇಂದಿನ ಖಾಸಗಿ ಶಿಕ್ಷಣ ಸಂಸ್ಥೆ ಮಾದರಿಯಲ್ಲಿ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಕಕ್ಕಿಸಿ ವಿದ್ಯೆ ನೀಡುವ ವಾಣಿಜ್ಯ ಮಾದರಿಯವಲ್ಲ ಬದಲಾಗಿ ಉಚಿತ ಶಿಕ್ಷಣ ನೀಡುವ ಸಂಸ್ಥೆಗಳು. ಇಂದಿಗೂ ಈ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಹತ್ತು ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕಾಲೇಜುಗಳು ಮಾತ್ರ ಪೇಟೆ ಪಟ್ಟಣಗಳಲ್ಲಿದ್ದರೆ, ಶಾಲೆಗಳು ಜಿಲ್ಲೆಯ ಮೂಲೆ ಮೂಲೆಯ ಹಳ್ಳಿಗಾಡಿನ ಪ್ರದೇಶಗಳಲ್ಲಿವೆ. ಇದು ಅವರ ಕಟ್ಟುವ ಹಿಂದಿನ ತಾತ್ವಿಕತೆಯ ಅಂದರೆ ಯಾರಿಗಾಗಿ ಅವರು ಕಟ್ಟ ಬಯಸಿದರು ಎನ್ನುವುದನ್ನು ಮನದಟ್ಟು ಮಾಡಿಕೊಡುತ್ತದೆ. ಇದು ಶುದ್ಧವಾದ ಕಟ್ಟುವ ಮಾದರಿಯಾದರೆ, ‘ಕುಟ್ಟುವ’ ಮತ್ತು ‘ಕಟ್ಟುವ’ ಅಂದರೆ ಮುರಿದು ಕಟ್ಟುವ ಕೆಲಸವನ್ನೂ ಅವರು ಮಾಡಿದ್ದಾರೆ. 1935ರಲ್ಲಿಯೇ ಗೇಣಿ ಪದ್ದತಿಯ ವಿರುದ್ಧ ದಶಕಗಳ ಕಾಲ ಸಂಘಟಿತ ಹೋರಾಟ ನಡೆಸಿದರು ಮತ್ತು ಅದರಿಂದಾಗಿ ಜಿಲ್ಲೆಯಿಂದ ಐದು ವರ್ಷಗಳ ಕಾಲ ಅವರು ಗಡಿಪಾರು ಮಾಡಲ್ಪಟ್ಟಿದ್ದರು. ಅವರ ಕಾರ್ಯ ವ್ಯಾಪ್ತಿ ಅಂಕೋಲೆಯಿಂದ ಮುಂಬಯಿಯವರೆಗೂ ವ್ಯಾಪಿಸಿತ್ತು. ಮುಂಬಯಿಯಲ್ಲಿ ಬಂದರು ಕಾರ್ಮಿಕರ ಬಹು ದೊಡ್ಡ ಸಂಘಟನೆಯನ್ನು ಅವರು ಧೀರ್ಘ ಕಾಲ ಮುನ್ನಡೆಸಿದ್ದರು. ಗೋಪಾಲಕೃಷ್ಣ ಗೋಖಲೆಯವರು ಸ್ಥಾಪಿಸಿದ ‘ಸರ್ವಂಟ್ಸ್ ಆಫ್ ಇಂಡಿಯಾ’ ಸಂಸ್ಥೆಯ ಆಜೀವ ಸದಸ್ಯರಾಗಿ ಅವರು ಮಾಡಿದ ಸಮಾಜ ಕಟ್ಟುವ ಕೆಲಸ ಇನ್ನೂ ಅನೇಕ.
ಕವಿಯಾಗಿ ಪ್ರಾರಂಭದಲ್ಲಿ ಎರಡು ಕವಿತಾ ಸಂಕಲನಗಳನ್ನು ಹೊರತಂದರೂ ನಂತರದಲ್ಲಿ ಅವರು ತಮ್ಮ ಅಭಿವ್ಯಕ್ತಿಗಾಗಿ ಪ್ರಮುಖವಾಗಿ ಆರಿಸಿಕೊಡಿದ್ದು ಚೌಪದಿ ಎಂಬ ನಾಲ್ಕು ಸಾಲುಗಳ ‘ಚುಟಕ’ ಪ್ರಕಾರವನ್ನು. ಕನ್ನಡದಲ್ಲಿ ಈ ಪ್ರಕಾರಕ್ಕೆ ಅವರೇ ಜನ್ಮದಾತರು ಹಾಗಾಗಿಯೇ ಅವರು ‘ಚುಟಕ ಬ್ರಹ್ಮ’ ಎಂದು ಹೆಸರಾದರು. ಅವರು ಸುಮಾರು ಐದು ಸಾವಿರಕ್ಕಿಂತಲೂ ಹೆಚ್ಚು ಚುಟಕಗಳನ್ನು ಬರೆದಿರಬಹುದೆಂದು ಅಂದಾಜಿಸಲಾಗುದೆ. ವಿಡಂಬನೆಯ ಮೂಲಕ ಸಾಮಾನ್ಯರಲ್ಲಿ ಸಾಮಾಜಿಕ ಅರಿವು ಮೂಡಿಸುವ ಉದ್ದೇಶದಿಂದಲೇ ಇವುಗಳಲ್ಲಿ ಬಹು ಪಾಲು ರಚಿತವಾಗಿದ್ದರೂ ಭಾವಗೀತಾತ್ಮಕವಾದವು ಮತ್ತು ಕಾವ್ಯಾತ್ಮಕವಾದವೂ ಹಲವಿವೆ. ವ್ಹಾ! ವ್ಹಾ! ಎನ್ನುವ ಸುಂದರವಾದ ಸಾಹಿತ್ಯದ ರಚನೆ ಅವರ ಚುಟಕಗಳ ರಚನೆಯ ಹಿಂದಿನ ಉದ್ದೇಶವಾಗಿರಲಿಲ್ಲ ಎನ್ನುವುದು ದಿನಕರರ ಕಾರ್ಯ ಚಟುವಟಿಕೆಗಳನ್ನು ಬಲ್ಲವರಿಗೆ ಇದು ಸ್ವಯಂ ವೇದ್ಯವಾಗಿದೆ. ಬಿಡಿ ಬಿಡಿಯಾಗಲ್ಲದೆ ಇಡಿಯಾಗಿ (ದಿನಕರನ ಚೌಪದಿ-ಕಸಾಪ ಪ್ರಕಟಣೆ 2500 ಚೌಪದಿಗಳ ಸಂಗ್ರಹ ) ಓದಿದಾಗ ಈ ದೇಶದ ರಾಜಕಾರಣದ ಮತ್ತು ಸಾಮಾಜಿಕ ದರ್ಶನವನ್ನು ಅವುಗಳ ವಿವಿಧ ಆಯಾಮಗಳಲ್ಲಿ ನಮಗೆ ಮಾಡಿಸಬಲ್ಲ ಶಕ್ತಿ ಅವರ ಈ ಚೌಪದಿಗಳಿಗಿವೆ ಅನ್ನಿಸದಿರದು.
ಬೇಕಿಲ್ಲ ನವ ಭಾರತಕೆ ಹರಿಯ ಹರಕೆ
ಮೊದಲು ಬೇಕಾದದ್ದು ಗುಡಿಸಲಿಕೆ ಪೊರಕೆ
ಈ ಪೊರಕೆಯಿಂದ ಕಸಗುಡಿಸಲಿಕೆ ದೇವ
ಭೂಮಿಗಿಳಿದರೆ ಉಳಿಯುವುದು ನನ್ನ ಜೀವ
ಭಗವಂತನಿಗೆ ನಾನು ಆಹ್ವಾನ ಕೊಟ್ಟೆ
ನೆರೆದ ಪುರಸಭೆಯಲ್ಲಿಯೇ ಹೇಳಿಬಿಟ್ಟೆ
ಬಡ ಜನರ ಕಲ್ಯಾಣ ಆಗದಿದ್ದಲ್ಲಿ
ನೀ ರಾಜಿನಾಮೆ ಕೊಡು, ನೀನೇಕೆ ಇಲ್ಲಿ ?
ಇಂಥ ಸಾವಿರಾರು ಚೌಪದಿಗಳು ಸಾಮಾಜಿಕ ಕಾಳಜಿಯವಾದರೆ ಅವರು ಮಲೆನಾಡನ್ನು ಮದುಮಗಳಾಗಿ ಕಂಡು ವರ್ಣಿಸಿದ ಪರಿ ಅನನ್ಯ.
ಮಲೆನಾಡ ಹುಡುಗಿ, ಮದುವೆಯ ಮುಹೂರ್ತ ನಾಳೆ
ಮಂಟಪವ ಸಿಂಗರಿಸಲಿಕೆ ಉಂಟು ಬಾಳೆ
ಚಪ್ಪರಕೆ ಹಿಂಗಾರ ನಿಂಬೆ ನಾರಂಗ
ಅಡಿಕೆಗೊನೆ ಮದುಮಗನ ತಲೆಗೆ ಬಾಸಿಂಗ
‘ಮಲೆನಾಡ ರಮಣಿಗೆ’ ಎನ್ನುವ ಇನ್ನೊಂದು ಚೌಪದಿಯ ಚೆಲುವು ನೋಡಿ
ಮಲೆನಾಡ ರಮಣಿ, ಕೇಳ್ ಸೊಗಸಾದ ಕನಸು:
ನಿನ್ನ ಮಂಗಳ ಸೂತ್ರದಲ್ಲಿ ಕರಿಮೆಣಸು
ಮತ್ತೆ ಕೊರಳಿನ ಸರವ ಯಾಲಕ್ಕಿಯಿಂದ
ಪೋಣಿಸಲು ಇಂದ್ರನೂ ಧರೆಗಿಳಿದು ಬಂದ
ಅಧಿಕಾರಕ್ಕಾಗಿ ಹಪಹಪಿಸುವ ಇಂದಿನ ರಾಜಕಾರಣಿಗಳಂತಲ್ಲದೆ ಅವರಿಗಿದ್ದ ‘ಕಟ್ಟುವ’ ಬದ್ಧತೆ ಮತ್ತು ಛಲವನ್ನು ತೋರಿಸುವ ಈ ಚೌಪದಿಯನ್ನು ಅವರು ಲೋಕಸಭೆ ಚುನಾವಣೆಯೊಂದರಲ್ಲಿ ಸೋತಾಗ ಬರೆದದ್ದು
ಚುನಾವಣೆಯಲ್ಲಿ ಸೋಲು
ಓ ಮಗನೆ, ಬಿದ್ದರೂ ನನಗಿಲ್ಲ ಸೋಲು
ಭೂಮಿಯಲಿ ಭದ್ರವಾಗಿದೆ ನನ್ನ ಕಾಲು
ನೆಲದ ಮೇಲೆಯೆ ಕುಳಿತು ಜನಸೇವೆಗೈದು
ಶಾಲೆಗಳ ಕಟ್ಟುವೆನು ಮತ್ತೆ ಹದಿನೈದು.
ಹೀಗೆ ವೈವಿಧ್ಯಮಯವಾದ ಚುಟಕಗಳನ್ನು ಸಾವಿರಾರು ಬರೆದರೂ ಅವೆಲ್ಲ ಶಾಶ್ವತವಾಗಿ ಉಳಿದು ಬಿಡುತ್ತವೆ ಎಂಬ ಭ್ರಮೆ ಅವರಿಗೆಂದೂ ಇರಲಿಲ್ಲ. ಅಥವಾ ಅಗಾಧವಾದದ್ದೇನನ್ನೋ ಬರೆದಿದ್ದೇನೆ ಎನ್ನುವ ಭ್ರಾಂತಿ ಕೂಡ. ನಿರ್ಲಿಪ್ತತೆಯನ್ನು ತೋರುವ ಈ ಚುಟಕಗಳು ನಮ್ಮ ಕಣ್ಣುಗಳಲ್ಲಿ ಅವರನ್ನು ಇನ್ನಷ್ಟು ಎತ್ತರದಲ್ಲಿ ನಿಲ್ಲಿಸುತ್ತವೆ.
ನನ್ನ ಚುಟುಕಗಳು
ನಾ ಬರೆದ ಚುಟಕಗಳ ಸಂಖ್ಯೆ ವಿಪರೀತ
ಸೇಕಡಾ ತೊಂಬತ್ತು ಹೊಡೆಯುವವು ಗೋತಾ.
ಉಳಿದ ಹತ್ತರ ಪೈಕಿ ಏಳೆಂಟು ಸತ್ತು
ಒಂದೆರಡು ಬದುಕಿದರೆ ಅವು ಮಾತ್ರ ಮುತ್ತು.
ಕವಿ ಹೇಳಿದ್ದು
ಪೋಯಟ್ರಿ ಬರೆದಿಟ್ಟು ಹೋಗುವೆನು ಸತ್ತು
ಆಮೇಲೆ ಏನಾಗುವದು ಇಲ್ಲ ಗೊತ್ತು
ಅವು ಸತ್ತರೆ ಮಗನೆ, ನನಗಿಲ್ಲ ದುಃಖ
ನನ್ನ ಸಂತೋಷಕ್ಕೆ ಬರೆದದ್ದೆ ಲೆಕ್ಕ
ದಿನಕರ ದೇಸಾಯಿ ಕಾಲವಾಗಿಯೇ ಸುಮಾರು ನಾಲ್ಕು ದಶಕಗಳು ಕಳೆದವು. ಬಡ ಶಾಲಾ ಮಾಸ್ತರರ ಮಗನಾಗಿ ಹುಟ್ಟಿದ ಅವರು, ಸಾವಿರಾರು ವಿದ್ಯಾರ್ಥಿಗಳು ಓದುವ ಶಾಲೆ ಕಾಲೇಜುಗಳನ್ನು ಕಟ್ಟಿದರು, ಆದರೆ ಸ್ವಂತಕ್ಕೆ ಉಳಿಯಲು ಒಂದು ಮನೆಯನ್ನೂ ಕಟ್ಟಿಕೊಂಡಿರಲಿಲ್ಲ. ಸಾರ್ವಜನಿಕ ಬದುಕಿನಲ್ಲಿರುವವರು ಹೇಗಿರಬೇಕು ಎನ್ನುವುದಕ್ಕೆ ಒಂದು ಮಾದರಿಯಾಗಿ ಬದುಕಿ ಬಾಳಿದರು.
-ಶ್ರೀಪಾದ್ ಹೆಗಡೆ, ಹವ್ಯಾಸಿ ಬರಹಗಾರರು, ಬೆಂಗಳೂರು