ಇಂದಿನಿಂದ ಮೂರು ದಿನಗಳ ಕಾಲ ಭಾರಿ ಮಳೆ ಮುನ್ಸೂಚನೆ.
1 min read
ಇಂದಿನಿಂದ ಮೂರು ದಿನಗಳ ಕಾಲ ಭಾರಿ ಮಳೆ ಮುನ್ಸೂಚನೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಮತ್ತು ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ರಾಜ್ಯದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ನ.7ರಿಂದ 9ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದೆ.
ಇಂದಿನಿಂದ ಮಂಗಳವಾರದವರೆಗೆ ಕರಾವಳಿಯ ಹಲವೆಡೆ ಗುಡುಗು ಸಹಿತ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಮುಂದಿನ ಎರಡು ದಿನಗಳವರೆಗೆ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.
ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನ.7ರಂದು ಹೆಚ್ಚು ಮಳೆಯಾಗಬಹುದು. ಉತ್ತರ ಒಳನಾಡಿನಲ್ಲಿ ಗುಡುಗು, ಸಿಡಿಲು ಹೆಚ್ಚಾಗಿ ಇರಲಿದ್ದು, ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಇದೇ 9ರಿಂದ ರಾಜ್ಯದಾದ್ಯಂತ ಮಳೆ ತಗ್ಗುವ ನಿರೀಕ್ಷೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ.