ಉಯ್ಯಾಲೆ ತಂತಿಗೆ ಸಿಲುಕಿ ಬಾಲಕಿ ಸಾವು…
ಮಕ್ಕಳನ್ನ ಒಬ್ಬಂಟಿಯಾಗಿ ಆಟವಾಡಲು ಬಿಡುವ ಮುನ್ನ ಪೋಷಕರು ಎಚ್ಚರ ವಹಿಸುವುದ ಅವಶ್ಯಕ. ಉಯ್ಯಾಲೆಯ ಹಗ್ಗಕ್ಕೆ ಸಿಲುಕಿಕೊಂಡು 11 ವರ್ಷದ ಬಾಲಕಿಯೊಬ್ಬಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಕೆಂಚನಹಳ್ಳಿಯಲ್ಲಿ ನಡೆದಿದೆ.
11 ವರ್ಷದ ಭಾವನಾ ದೀಕ್ಷಿತ್ ಮೃತಪಟ್ಟ ಬಾಲಕಿ. ಡ್ಯೂಪ್ಲೆಕ್ಸ್ ಮನೆಯ ಮೊದಲ ಮಹಡಿಯಲ್ಲಿ ಭಾವನಾ ಆಟವಾಡುತ್ತಿದ್ದಳು, ಪೋಷಕರು ನೆಲಮಹಡಿಯಲ್ಲಿದ್ದಾರೆ. ಬಾಲಕಿ ಮೊದಲ ಮಹಡಿಯಲ್ಲಿ ಉಯ್ಯಾಲೆಲ್ಲಿ ಆಟವಾಡಿಕೊಂಡಿದ್ದಳು. ಹಲವು ಗಂಟೆಗಳಾದರೂ ಮಹಡಿಯಿಂದ ಬಾಲಕಿ ಬರದೇ ಇದ್ದಾಗ ಪೋಷಕರು ಮಹಡಿಯ ಮೇಲೆ ಹೋಗಿ ನೋಡಿದ್ದಾರೆ. ಈ ವೇಳೆ ಬಾಲಕಿ ಉಯ್ಯಾಲೆಯ ತಂತಿಯಲ್ಲಿ ಸಿಲುಕಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಬಾಲಕಿಯನ್ನು ಮಾಗಡಿ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಮೆಡಿಕೋ-ಲೀಗಲ್ ಪ್ರಕರಣವೆಂದು ದಾಖಲು ಮಾಡಿಕೊಂಡಿರುವ ವೈದ್ಯರು, ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಆಸ್ಪತ್ರೆಗೆ ತೆರಳಿದ್ದು, ಬಾಲಕಿ ತಂದೆ ರವಿ ಕುಮಾರ್ ದೀಕ್ಷಿತ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಸಿಆರ್’ಪಿಸಿಯ ಸೆಕ್ಷನ್ 174 ರ ಅಡಿಯಲ್ಲಿ ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಸಾವಿಗೆ ನಿಖರವಾದ ಕಾರಣ ಮತ್ತು ಸಮಯವನ್ನು ಕಂಡುಹಿಡಿಯಲು ನಾವು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಮೃತ ಬಾಲಕಿಯ ತಂದೆಯ ಹೇಳಿಕೆಯಂತೆ ಭಾವನಾ ಅವರು ಉಯ್ಯಾಲೆಯ ಪ್ಲಾಸ್ಟಿಕ್ ತಂತಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.