16 army jawans killed: ಕಂದಕಕ್ಕೆ ಉರುಳಿದ ಸೇನಾ ವಾಹನ ; 16 ಯೋಧರ ದಾರುಣ ಸಾವು…
ಭಾರತೀಯ ಸೇನೆಯ ವಾಹನ ಕಂದಕಕ್ಕೆ ಉರುಳಿ 16 ಮಂದಿ ಯೋಧರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಸಿಕ್ಕಿಂನ ಲಾಚೆನ್ ಪಟ್ಟಣದಲ್ಲಿ ನಡೆದಿದೆ. ಅಪಘಾತದಲ್ಲಿ ನಾಲ್ವರು ಯೋಧರ ಸ್ಥತಿ ಗಂಭೀರವಾಗಿದ್ದು ಅವರನ್ನ ಏರ್ ಲಿಫ್ಟ ಮಾಡಲಾಗಿದೆ.
ಸೈನಿಕರು ಪ್ರಯಾಣಿಸುತ್ತಿದ್ದ ಟ್ರಕ್ ಕಡಿದಾದ ಇಳಿಜಾರಿನಲ್ಲಿ ಇಳಿಯುವಾಗ ಆಯತಪ್ಪಿ ಕಣಿವೆಗೆ ಬಿದ್ದಿದ್ದರಿಂದ ಭಾರತೀಯ ಸೇನೆಯ ಮೂವರು ಜೂನಿಯರ್ ಕಮಿಷನ್ಡ್ ಅಧಿಕಾರಿಗಳು ಸೇರಿದಂತೆ 16 ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಅಪಘಾತದಲ್ಲಿ ಸೇನಾ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.
ಯೋಧರ ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದ್ದು ಮರಣೋತ್ತರ ಪರೀಕ್ಷೆಗಾಗಿ ಗ್ಯಾಂಗ್‌ಟಾಕ್‌ನ ಸರ್ಕಾರಿ ಎಸ್‌ಟಿಎನ್‌ಎಂ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತಿದ್ದು, ನಂತರ ಸೇನೆಗೆ ಹಸ್ತಾಂತರಿಸಲಾಗುತ್ತದೆ.
ಘಟನೆಯ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಟ್ವೀಟ್ ಮಾಡಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
16 army jawans killed, 4 injured in road accident in Sikkim








