ರಾಜ್ಯದಲ್ಲಿಂದು 165 ಹೊಸ ಓಮಿಕ್ರಾನ್ ಕೇಸ್ ಪತ್ತೆ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ನ ರೂಪಾಂತರಿ ಓಮಿಕ್ರಾನ್ ತನ್ನ ಕಬಂದ ಬಾಹುಗಳನ್ನು ಕ್ಷಿಪ್ರಗತಿಯಲ್ಲಿ ಚಾಚುತ್ತಿದೆ. ರಾಜ್ಯದಲ್ಲಿಂದು 165 ಹೊಸ ಓಮಿಕ್ರಾನ್ ಕೇಸ್‍ಗಳು ವರದಿಯಾಗಿದೆ. ಈ ಎಲ್ಲಾ ಪ್ರಕರಣಗಳು ಬೆಂಗಳೂರಿನಲ್ಲಿಯೇ ಪತ್ತೆಯಾಗಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಸುಧಾಕರ್ ಅವರು, ಬೆಂಗಳೂರಿನಲ್ಲಿ ಇಂದು 165 ಹೊಸ ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 931 ಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಪತ್ತೆಯಾಗಿರುವ ಒಟ್ಟು 931 ಕೇಸ್ ಓಮಿಕ್ರಾನ್ ಕೇಸ್‍ಗಳ ಪೈಕಿ, ಬೆಂಗಳೂರು ನಗರ ಒಂದರಲ್ಲೆ 880 ಕೇಸ್‍ಗಳು ದಾಖಲಾಗಿವೆ. ಉಳಿದ 51 ಓಮಿಕ್ರಾನ್ ಕೇಸ್ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕಂಡುಬಂದಿವೆ.
ಒಮಿಕ್ರಾನ್ ಸೋಂಕಿನ ಜೊತೆ ಜೊತೆಗೆ ಬೆಂಗಳೂರಿನಲ್ಲಿ ಕೊರೊನಾ ಮೂರನೇ ಅಲೆಯ ಆರ್ಭಟ ಜೋರಾಗಿದೆ. ಪ್ರತಿ ನಿತ್ಯ ರಾಜ್ಯ ರಾಜಧಾನಿಯಲ್ಲಿ 20 ಸಾವಿರಕ್ಕೂ ಹೆಚ್ಚು ಹೊಸ ಕೇಸ್ ಗಳು ಪತ್ತೆಯಾಗುತ್ತಿವೆ. ಇದು ಮೆಟ್ರೋ ಮಂದಿಯ ಆತಂಕಕ್ಕೆ ಕಾರಣವಾಗಿದೆ.