ಹುಬ್ಬಳ್ಳಿ: ಪತಿ, ಪತ್ನಿ ಜಗಳದ ಸಂಧಾನಕ್ಕೆ ಬಂದಿದ್ದ ಪೊಲೀಸರು ಬರೋಬ್ಬರಿ 2 ಲಕ್ಷ ರೂ. ಬೇಡಿಕೆ ಇಟ್ಟು ವ್ಯಕ್ತಿಯ ಸಾವಿಗೆ ಕಾರಣರಾಗಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ.
ಪೊಲೀಸರ ಸಂಧಾನಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಈ ಘಟನೆ ನಗರದ ಕೋಟಿಲಿಂಗೇಶ್ವರ (Kotlingeshwara) ನಗರದಲ್ಲಿ ನಡೆದಿದೆ. ನಿಖಲ್ (28) ಆತ್ಮಹತ್ಯೆ ಮಾಡಿಕೊಂಡ ಪತಿ ಎಂದು ಗುರುತಿಸಲಾಗಿದೆ. ನಿಖಿಲ್ 11 ತಿಂಗಳ ಹಿಂದೆ ಪ್ರೀತಿ ಎಂಬ ಯುವತಿಯನ್ನು ಮದುವೆಯಾಗಿದ್ದರು. ಆದರೆ ಗಂಡ-ಹೆಂಡತಿ ನಡುವೆ ಆರಂಭದಿಂದಲೂ ಸಾಮರಸ್ಯ ಮೂಡಿರಲಿಲ್ಲ. ಹೀಗಾಗಿ ಜಗಳ ನಡೆಯುತ್ತಿತ್ತು. ಹೀಗಾಗಿ ತವರಿಗೆ ಹೋಗಿದ್ದರು.
ಹೀಗಾಗಿ ನಿಖಿಲ್ ಪತ್ನಿ ಪ್ರೀತಿ ಹಾಗೂ ಕುಟಂಬಸ್ಥರು ಕೇಶ್ವಾಪುರ ಠಾಣೆಗೆ ನಿಖಿಲ್ ಕರೆಸಿ ಬೆದರಿಕೆ ಹಾಕಿರುವ ಆರೋಪ ಕೂಡ ಕೇಳಿಬಂದಿದೆ. ನೋಟಿಸ್ ನೀಡಿ ನಿಖಿಲ್‍ನನ್ನು ಠಾಣೆ ಕರೆಸಿ ಪೊಲೀಸರು ಮಾನಸಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದ್ದು, ಒಂದೇ ದಿನದಲ್ಲಿ 2 ಲಕ್ಷ ರೂ. ನೀಡುವಂತೆ ತಾಕೀತು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ನಿಖಿಲ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.








