ಬೆಳಗಾವಿ: ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಜಾರಿಗೊಳಿಸಿತ್ತು. ಸದ್ಯ ಇದೇ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈ ಯೋಜನೆ ಜಾರಿಗೆ ಮುಂದಾಗಿದೆ. ಆದರೆ, ಮನೆಗೊಬ್ಬರಿಗೆ ಈ ಯೋಜನೆಯ ಲಾಭ ನೀಡಬೇಕಾಗಿದ್ದು, ಯಾರಿಗೆ ನೀಡಬೇಕು ಎಂಬ ಗೊಂದಲ ಶುರುವಾಗಿದೆ.
ಮನೆಯಲ್ಲಿ ಅತ್ತೆಯೇ ಸೀನಿಯರ್, ಆದ್ದರಿಂದ ಗೃಹಲಕ್ಷ್ಮಿ ಯೋಜನೆ ಯಾರಿಗೆ ಬೇಕೆಂದು ಅತ್ತೆಯನ್ನು ಕೇಳುತ್ತೇವೆ. ಅತ್ತೆ ನನ್ನ ಬದಲು ಸೊಸೆಗೆ ಯೋಜನೆ ಕೊಡಿ ಅಂತ ಹೇಳಿದರೆ `ಗೃಹಲಕ್ಷ್ಮಿ’ ಯೋಜನೆ ಸೊಸೆಗೆ ಸಿಗುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದಾರೆ.
ಗೃಹಲಕ್ಷ್ಮಿ ಗ್ಯಾರಂಟಿ (Congress Guarantee) ಯೋಜನೆ ಕುರಿತು ಮಾತನಾಡಿದ ಅವರು, ಗೃಹಲಕ್ಷ್ಮಿ ಗ್ಯಾರಂಟಿ (Congress Guarantee) ಯೋಜನೆ ಜಾರಿ ಕುರಿತು ಈಗಾಗಲೇ ಸಭೆ ನಡೆದಿವೆ. ಇಲಾಖೆ ಮಂತ್ರಿಗಳು ಮತ್ತು ಅಧಿಕಾರಿಗಳ ಸಭೆಯನ್ನು ಸಿಎಂ ಸಿದ್ದರಾಮಯ್ಯ ಕರೆದಿದ್ದಾರೆ. ನಮ್ಮ ಇಲಾಖೆಯ ಜೊತೆ ಆರ್‌ಡಿಪಿಆರ್, ಕಂದಾಯ ಇಲಾಖೆ ಅಧಿಕಾರಿಗಳ ಸಭೆಯೂ ನಡೆಯಲಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸಚಿವ ಸತೀಶ್ ಜಾರಕಿಹೊಳಿ (Satish Jarkiholi), ಯಾರಿಗೆ ಕೊಡಬೇಕು ಎಂಬುವುದರ ಕುರಿತು ಷರತ್ತು ಅನ್ವಯವಾಗುತ್ತದೆ. ಮೊದಲ ಆದ್ಯತೆ ಅತ್ತೆಗೆ ಇರುತ್ತದೆ. ಅತ್ತೆ ಸ್ವಯಂಪ್ರೇರಿತವಾಗಿ ಸೊಸೆಗೆ ಕೊಡುತ್ತೇನೆ ಅಂದರೆ ಆ ಕಂಡಿಷನ್ ಇಲ್ಲಿ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.








