ಲಖನೌ, ಮೇ 25 : ಲಾಕ್ ಡೌನ್ ನಿಂದ ಸಿಲುಕಿ ಹಾಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸಲು ಸರ್ಕಾರ ಶ್ರಮಿಕ್ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ. 25 ದಿನಗಳಿಂದ ವಲಸೆ ಕಾರ್ಮಿಕರನ್ನು ತವರು ನಾಡಿಗೆ ಕರೆದೊಯ್ದ ಶ್ರಮಿಕ ರೈಲಿನಲ್ಲಿ ಇಲ್ಲಿಯವರೆಗೆ 20 ಮಹಿಳೆಯರಿಗೆ ಹೆರಿಗೆ ನಡೆದಿದೆ ಎಂಬ ವಿಷಯವನ್ನು ರೈಲ್ವೆ ಸುರಕ್ಷತಾ ಪಡೆಯ ಮಹಾ ನಿರ್ದೇಶಕ ಅರುಣ್ಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಬೆಂಗಳೂರಿನಿಂದ ಉತ್ತರ ಪ್ರದೇಶದ ಲಖನೌ ಗೆ ಹೊರಟ್ಟಿದ್ದ ವೈಟ್ ಫೀಲ್ಡ್ ಬಳಿ ಕೆಲಸ ಮಾಡುತ್ತಿದ್ದ ಕಾರ್ಮಿಕ ದಂಪತಿಗಳಿಗೆ ಶ್ರಮಿಕ್ ರೈಲು ಪ್ರಯಾಣದಲ್ಲಿ ಹೆಣ್ಣು ಮಗು ಜನಿಸಿದ್ದು, ತಾಯಿ ಹಾಗೂ ಹೆಣ್ಣು ಮಗು ಆರೋಗ್ಯವಾಗಿದ್ದಾರೆ. ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಲಖನೌಗೆ ಶ್ರಮಿಕ್ ರೈಲು ನಲ್ಲಿ ಪ್ರಯಾಣ ಆರಂಭಿಸಿದ ಕಾರ್ಮಿಕರ ಗುಂಪಿನಲ್ಲಿ ವೈಟ್ ಫೀಲ್ಡ್ ಬಳಿ ಕೆಲಸ ಮಾಡುತ್ತಿದ್ದ ಈ ಕಾರ್ಮಿಕ ದಂಪತಿಗಳು ಇದ್ದರು. 9 ತಿಂಗಳ ಗರ್ಭಿಣಿ ಸಂಗೀತಾಗೆ ರೈಲು ಪ್ರಯಾಣದ ಎರಡನೇ ದಿನ ಹೆರಿಗೆ ನೋವು ಕಾಣಿಸಿಕೊಂಡಿತು. ರೈಲಿನಲ್ಲಿ ಒಬ್ಬ ವೈದ್ಯರು ಕೂಡ ಇರಲಿಲ್ಲ. ರೈಲಿನಲ್ಲಿದ್ದ ಮಹಿಳೆಯರೇ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ರೈಲಿನಲ್ಲಿದ್ದ ಬೆಂಗಳೂರು ಪೊಲೀಸರು ಹೆರಿಗೆ ಬಳಿಕ ಮಹಿಳೆಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ದೊರಕಿಸಿಕೊಟ್ಟಿದ್ದು, ಅವರ ಕಾಳಜಿಗೆ ಐಜಿಪಿ ಹೇಮಂತ್ ನಿಂಬಾಳ್ಕರ್ ಟ್ವಿಟ್ಟರ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಸೂರತ್ ನಿಂದ ಬಿಹಾರದ ನವಾಡಗೆ ಪ್ರಯಾಣಿಸುತ್ತಿದ್ದ ಶ್ರಮಿಕ್ ರೈಲಿನಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆಂದು ರೈಲ್ವೆ ಇಲಾಖೆ ಟ್ವೀಟ್ ಮಾಡಿದೆ. ಗುಜರಾತಿನ ಸೂರತ್ ನಿಂದ ಬಿಹಾರದ ನವಾಡಗೆ ಹೊರಟಿದ್ದ, ಶ್ರಮಿಕ್ ರೈಲಿಗೆ ಮಧ್ಯದಲ್ಲಿ ನಿಲುಗಡೆ ಇಲ್ಲದ ಕಾರಣ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡ ಕೂಡಲೇ ಅಧಿಕಾರಿಗಳಿಗೆ ತುರ್ತು ವೈದ್ಯಕೀಯ ಸೇವಾ ಅಗತ್ಯದ ಮಾಹಿತಿ ರವಾನೆಯಾಯಿತು. ಆಗ್ರಾದಲ್ಲಿ ಡಾ.ಪುಲ್ಕಿತ್ ಅವರ ತಂಡ ರೈಲನ್ನು ಹತ್ತಿ, ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿತು. ಮೇ 1 ರಿಂದ ಇಲ್ಲಿಯವರೆಗೆ 31 ಲಕ್ಷ ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಅವರ ಊರಿಗೆ 2,317 ಶ್ರಮಿಕ್ ವಿಶೇಷ ರೈಲು ತಲುಪಿಸಿದೆ.








