ಚೆನ್ನೈ: ದೇಶದಲ್ಲೇ ಅತಿಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳನ್ನು ಹೊಂದಿರುವ ಡೇಂಜರ್ ಝೋನ್‍ನ ರಾಜ್ಯಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ಮಹಾಮಾರಿ ಕೊರೊನಾದಿಂದ ಮೃತಪಟ್ಟ 200 ಮಂದಿಯ ಲೆಕ್ಕವೇ ನಾಪತ್ತೆಯಾಗಿದ್ದು, ಮಾಹಿತಿ ಬಚ್ಚಿಡಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ತಮಿಳುನಾಡಿನಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ 36,841ಕ್ಕೆ ಏರಿಕೆಯಾಗಿದ್ದು, 326 ಮಂದಿ ಬಲಿಯಾಗಿದ್ದಾರೆ. ನಿನ್ನೆ ಒಂದೇ ದಿನ ಮಹಾಮಾರಿಗೆ 19 ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.
ಆದರೆ, ಚೆನ್ನೈನ ವಿವಿಧ ಆಸ್ಪತ್ರೆಗಳಲ್ಲಿ ಕೊರೊನಾದಿಂದ ಮೃತಪಟ್ಟ 200 ಜನರ ಲೆಕ್ಕವನ್ನು ನೀಡಿಲ್ಲ. ಇದು ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಿನ್ನೆ ತಮಿಳುನಾಡಿನಲ್ಲಿ 326 ಕೊರೊನಾಗೆ ಬಲಿಯಾಗಿದ್ದು, ಇವರಲ್ಲಿ 260 ಮಂದಿ ಚೆನ್ನೈ ಒಂದರಲ್ಲೇ ಮೃತಪಟ್ಟಿದ್ದಾರೆ. ಚೆನ್ನೈ ಮಹಾನಗರ ಪಾಲಿಕೆಯಲ್ಲಿ ಪ್ರತಿನಿತ್ಯ ಕೊರೊನಾ ಹಾಗೂ ಇತರೆ ಕಾಯಿಲೆಗಳಿಂದ ಮೃತಪಟ್ಟವರ ಲೆಕ್ಕ ಇಡುವ ವ್ಯವಸ್ಥೆಯೇ ಸರಿಯಾಗಿ ನಡೆಯುತ್ತಿಲ್ಲ. ಈ ನಿರ್ಲಕ್ಷ್ಯವೇ ಕೊರೊನಾದಿಂದ ಮೃತಪಟ್ಟ 200 ಜನರ ಲೆಕ್ಕ ಕೈಬಿಟ್ಟು ಹೋಗಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಲೆಕ್ಕ ಬಚ್ಚಿಟ್ಟಿಲ್ಲ, ತನಿಖೆ ಮಾಡ್ತೇವೆ ಎಂದ ಸರ್ಕಾರ
ಕೊರೊನಾ ಮಹಾಮಾರಿಗೆ ಮೃತಪಟ್ಟ 200 ಜನರ ಲೆಕ್ಕವನ್ನು ಸರ್ಕಾರ ಬಚ್ಚಿಟ್ಟಿಲ್ಲ. ಈ ಸಂಬಂಧ 9 ಮಂದಿ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗಿದೆ ಎಂದು ತಮಿಳುನಾಡು ಆರೋಗ್ಯ ಇಲಾಖೆ ಕಾರ್ಯದರ್ಶಿ ಬೀಲಾ ರಾಜೇಶ್ ಸ್ಪಷ್ಟನೆ ನೀಡಿದ್ದಾರೆ.
ಚೆನ್ನೈ ನಗರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಮಾರ್ಚ್‍ನಿಂದ ಮೃತಪಟ್ಟವರ ಅಂಕಿ ಅಂಶಗಳನ್ನು ಕಮಿಟಿ ಪರಿಶೀಲನೆ ನಡೆಸಲಿದೆ. ಬೇರೆ ಕಾರಣಳಿಂದ ಮೃತಪಟ್ಟವರು ಹಾಗೂ ಶಂಕಿತರನ್ನು ಕೊರೊನಾದಿಂದಲೇ ಮೃತಪಟ್ಟಿದ್ದಾರೆ ತಪ್ಪಾಗಿ ಅರ್ಥೈಸಲಾಗಿದೆ. ನಾವು ಯಾವುದೇ ಕಾರಣಕ್ಕೆ ಅಂಕಿ ಸಂಖ್ಯೆಗಳನ್ನು ಬಚ್ಚಿಟ್ಟಿಲ್ಲ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟವರ ಮಾಹಿತಿಯಲ್ಲಿ ಸರಿಯಾಗಿಯೇ ಕಲೆ ಹಾಕುತ್ತಿದ್ದೇವೆ. ಆದರೂ, ಉನ್ನತಮಟ್ಟದ ಸಮಿತಿ ಈ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದು ಬೀಲಾ ರಾಜೇಶ್ ತಿಳಿಸಿದ್ದಾರೆ.
ಲೆಕ್ಕ ತಪ್ಪಾಗಿರುವುದು ನಿಜ
ತಮಿಳುನಾಡು ಸರ್ಕಾರವೇನೋ ಕೊರೊನಾ ಮೃತರ ಲೆಕ್ಕ ಮುಚ್ಚಿಟ್ಟಿಲ್ಲ ಎನ್ನುತ್ತಿದೆ. ಆದರೆ, ಚೆನ್ನೈ ಮಹಾನಗರ ಪಾಲಿಕೆ ಅಧಿಕಾರಿಗಳ ಮೂಲಗಳು ಲೆಕ್ಕ ತಪ್ಪಾಗುತ್ತಿರುವುದು ನಿಜ ಎಂದು ಹೇಳುತ್ತವೆ. ಚೆನ್ನೈನ ನಗರದಲ್ಲಿ ಪ್ರತಿನಿತ್ಯ ಸಂಭವಿಸುವ ಸಾವು ಮತ್ತು ಜನನದ ದಾಖಲೆ ಇಡುವುದು ಕಷ್ಟವಾಗುತ್ತಿದೆ. ಸಿಬ್ಬಂದಿ ಕೊರತೆ ಇದ್ದು, ಲಾಕ್‍ಡೌನ್‍ನ ಶಿಷ್ಟಾಚಾರದ ಮಾಹಿತಿ, 1000 ಕಂಟೇನ್‍ಮೆಂಟ್ ಝೋನ್‍ಗಳ ಅಂಕಿ ಅಂಶ ಸೇರಿದಂತೆ ಎಲ್ಲಾ ಮಾಹಿತಿ ದಾಖಲಿಸಲು ಸಿಬ್ಬಂದಿಗೆ ಹೊರೆಯಾಗುತ್ತಿದೆ. ಹೀಗಾಗಿ ಈ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಆಗಿರುವ ಸಾಧ್ಯತೆ ಇದೆ ಎನ್ನುತ್ತಾರೆ.
ಸರ್ಕಾರಕ್ಕೆ ದೂರು
ಕೋವಿಡ್-19ನಿಂದ ಮೃತಪಟ್ಟವರ ಅಂಕಿ-ಅಂಶ ಕೊಡುವಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಚೆನ್ನೈನ ಭ್ರಷ್ಟಾಚಾರ ವಿರೋಧಿ ಸಂಘಟನೆ ಕಾರ್ಯಕರ್ತ ಅರಪ್ಪೂರ್ ಇಕ್ಕಮ್ ತಮಿಳುನಾಡು ಆರೋಗ್ಯ ಕಾರ್ಯದರ್ಶಿಗೆ ಲಿಖಿತ ದೂರು ನೀಡಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮೃತಪಟ್ಟ ಮೂವರ ಲೆಕ್ಕವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಕೊರೊನಾದಿಂದ ಸತ್ತವರ ಪಟ್ಟಿಗೆ ಸೇರಿಸಿಲ್ಲ. ಮೆಡಿಕಲ್ ಕಾಲೇಜುಗಳಲ್ಲಿ ಮೃತಪಟ್ಟರ ಮಾಹಿತಿ ನೇರವಾಗಿ ಆರೋಗ್ಯ ಇಲಾಖೆಗೆ ಹೋಗುತ್ತದೆ. ಆದರೆ, ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಚೆನ್ನೈ ಮಹಾನಗರ ಪಾಲಿಕೆ ಅಧಿಕಾರಿಗಳು 200 ಜನರ ಸಾವಿನ ಲೆಕ್ಕ ಸರಿಯಾಗಿ ನೀಡಿಲ್ಲ ಎಂದು ಒಬ್ಬರ ಮೇಲೆ ಒಬ್ಬರು ಆರೋಪ-ಪ್ರತ್ಯಾರೋಪಗಳಲ್ಲಿ ಮುಳುಗಿದ್ದಾರೆ ಎಂದು ಅರಪ್ಪೂರ್ ಇಕ್ಕಮ್ ಆರೋಪಿಸಿದ್ದಾರೆ…








