2007 T20 world Cup ಚಾಂಪಿಯನ್ಸ್ ಈಗೇನು ಮಾಡ್ತಿದ್ದಾರೆ
ಟಿ20 ವಿಶ್ವಕಪ್ ಎಂದಾಗಲೆಲ್ಲ ಚೊಚ್ಚಲ ಟಿ20 ವಿಶ್ವಕಪ್ ನ ನೆನಪು ಹಾಗೇ ಬಂದು ಹೀಗೆ ಹಾದು ಹೋಗುತ್ತದೆ. 2007ರ ಸೆಪ್ಟಂಬರ್ 24 ರಂದು ಯಂಗ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಟೀಮ್ ವಿಶ್ವಕಪ್ ಹಿಡಿದು ಕುಣಿದಾಡಿದ ನೆನಪು ಮರುಕಳಿಸುತ್ತದೆ. ಕಡುಬದ್ಧ ವೈರಿ ಪಾಕಿಸ್ತಾನವನ್ನು ಫೈನಲ್ನಲ್ಲಿ ಮಣಿಸಿದ್ದ ಟೀಮ್ ಇಂಡಿಯಾ ಭವಿಷ್ಯವನ್ನು ಬರೆದಿತ್ತು. ಅದೆಲ್ಲಾ ಮುಗಿದು 14 ವರ್ಷಗಳು ಕಳೆದಿದ್ದರೂ ನಡೆದಿದ್ದು ನಿನ್ನೆ ಮೊನ್ನೆ ನಡೆದಿದ್ದು ಅನ್ನುವ ಹಾಗಿದೆ. ಅಂದಹಾಗೇ ಅಂದಿನ ವಿಶ್ವ ಚಾಂಪಿಯನ್ ಗಳು ಈಗೇನು ಮಾಡ್ತಿದ್ದಾರೆ ಅನ್ನುವ ಕುತೂಹಲವಿದೆ.
ಮಹೇಂದ್ರ ಸಿಂಗ್ ಧೋನಿ
ದಕ್ಷಿಣ ಆಫ್ರಿಕಾದಲ್ಲಿ ವಿಶ್ವಕಪ್ ಗೆದ್ದ ತಂಡದ ಕ್ಯಾಪ್ಟನ್ ಆಗಿದ್ದ ಧೋನಿ ನಂತ್ರ ಕೂಲ್ ಕ್ಯಾಪ್ಟನ್ ಅನ್ನುವ ಪಟ್ಟಗಿಟ್ಟಿಸಿಕೊಂಡರು. ಧೋನಿ ನಡೆದಿದ್ದೇ ದಾರಿ ಅನ್ನುವ ಹಾಗಾಯಿತು. ವಿಶ್ವದ ಶ್ರೇಷ್ಠ ಕ್ಯಾಪ್ಟನ್ ಅನ್ನುವ ಹಣೆಪಟ್ಟಿ ಗಳಿಸಿದರು. ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿರುವ ಧೋನಿ ಈಗ ಟೀಮ್ ಇಂಡಿಯಾದ ಮೆಂಟರ್. ಐಪಿಎಲ್ನಲ್ಲಿ ಮಾತ್ರ ಆಡುವ ಧೋನಿ ವಿರಾಟ್ ಬಳಗದಲ್ಲಿ ಹೊಸ ಉತ್ಸಾಹ ತುಂಬುತ್ತಿದ್ದಾರೆ.
ಜೋಗಿಂದರ್ ಶರ್ಮಾ
ಟಿ20 ವಿಶ್ವಕಪ್ನ ಲಾಸ್ಟ್ ಓವರ್ ಹೀರೋ. ಮಿಸ್ಬಾ ಉಲ್ ಹಕ್ ವಿಕೆಟ್ ಪಡೆದು ಕಪ್ ಗೆಲ್ಲುವಂತೆ ಮಾಡಿದ್ದ ಬೌಲರ್ ಜೋಗಿ ನಂತರ ಕ್ರಿಕೆಟ್ ನಲ್ಲಿ ಕಾಣಿಸಿಕೊಂಡಿದ್ದೇ ಅಪರೂಪ. ಜೋಗಿಂದರ್ ಶರ್ಮಾ ಸದ್ಯ ಹರ್ಯಾಣದಲ್ಲಿ ಡಿಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಶಾಂತ್
ಶ್ರೀಶಾಂತ್… ಟೇಕ್ಸ್ ದ ಕ್ಯಾಚ್.. ಇಂಡಿಯಾ ವಿನ್ಸ್ ದ ವರ್ಲ್ಡ್ ಕಪ್. ರವಿಶಾಸ್ತ್ರಿಯ ಈ ಕಾಮೆಂಟರಿ ಕಣ್ಣಮುಂದೆ ಬರುವಾಗ ಶ್ರೀಶಾಂತ್ ಮಿಸ್ಬಾ ಉಲ್ ಹಕ್ ಹಿಡಿದ ಕಟ್ಟ ಕಡೆಯ ಕ್ಯಾಚ್ ನೆನಪಾಗುತ್ತದೆ. ಟೀಮ್ ಇಂಡಿಯಾದ ಸಂಭ್ರಮಕ್ಕೆ ನಾಂದಿ ಹಾಡಿದ್ದ ಶ್ರೀಶಾಂತ್ ನಂತರ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ ನಿಷೇಧಕ್ಕೆ ಒಳಗಾಗಿದ್ದರು. ಸದ್ಯ ಕೇರಳ ಪರ ಮತ್ತೆ ಕ್ರಿಕೆಟ್ ಆರಂಭಿಸಿದ್ದಾರೆ. ಬಾಲಿವುಡ್ ಮತ್ತು ಡ್ಯಾನ್ಸ್ ಶೋಗಳಲ್ಲೂ ಶ್ರೀಶಾಂತ್ ಅದೃಷ್ಟ ಪರೀಕ್ಷೆ ಮಾಡಿದ್ದರು.
ರೋಹಿತ್ ಶರ್ಮಾ
ಯುವ ಆಟಗಾರರಲ್ಲಿ ರೋಹಿತ್ ಶರ್ಮಾ 2007ರ ವಿಶ್ವಕಪ್ ಹೀರೋ. ಹಿಟ್ ಮ್ಯಾನ್ ಆಗಿ ಬೆಳೆದಿರುವ ರೋಹಿತ್ ಈಗ ಟೀಮ್ ಇಂಡಿಯಾದ ಉಪನಾಯಕ. ಈಗ ಅಂದು ಕಪ್ ಗೆದ್ದ ತಂಡದ ಏಕೈಕ ಸದಸ್ಯ ರೋಹಿತ್ ಆಗಿದ್ದಾರೆ.
ಯುವರಾಜ್ ಸಿಂಗ್
ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಯುವರಾಜ್ ಸಿಂಗ್. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವಿ ಸ್ಟುವರ್ಟ್ ಬ್ರಾಡ್ ಒಂದು ಓವರ್ನಲ್ಲಿ ಸಿಡಿಸಿದ ಆರು ಸಿಕ್ಸರ್ ಗಳನ್ನು ಯಾರೂ ಕೂಡ ಮರೆಯಲು ಸಾಧ್ಯವಿಲ್ಲ. ಇದೀಗ ಯುವರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದಾರೆ.
ವೀರೇಂದ್ರ ಸೆಹ್ವಾಗ್
ಟಿ20 ವಿಶ್ವಕಪ್ನ ಫೈನಲ್ ಬಿಟ್ಟು ಎಲ್ಲಾ ಪಂದ್ಯಗಳಲ್ಲೂ ಇನ್ನಿಂಗ್ಸ್ ಆರಂಭಿಸಿದ್ದ ವೀರೂ ಸದ್ಯ ಕಾಮೆಂಟೇಟರ್.
ಗೌತಮ್ ಗಂಭೀರ್
ಟಿ20 ವಿಶ್ವಕಪ್ ಫೈನಲ್ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಗಂಭೀರ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸದ್ಯ ಗಂಭೀರ್ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದು ಲೋಕಸಭಾ ಸದಸ್ಯ ಕೂಡ ಆಗಿದ್ದಾರೆ. ಕ್ರಿಕೆಟ್ ಕಮೆಂಟರಿ ಮತ್ತು ವಿಶ್ಲೇಷಣೆ ಕೂಡ ಮಾಡುತ್ತಿದ್ದಾರೆ.
ರಾಬಿನ್ ಉತ್ತಪ್ಪ
2007ತ ಟಿ20 ತಂಡದಲ್ಲಿ ರಾಬಿನ್ ಉತ್ತಪ್ಪ ಸ್ಪೋಟಕ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದರು. ಆ ಬಳಿಕ ಟೀಮ್ ಇಂಡಿಯಾದಿಂದ ಹೊರಬಿದ್ದರೂ ಉತ್ತಪ್ಪ ಇನ್ನೂ ನಿವೃತ್ತಿ ಘೋಷಿಸಿಲ್ಲ. ಇದೀಗ ಸಿಎಸ್ಕೆ ತಂಡದ ಭಾಗವಾಗಿರುವ ರಾಬಿನ್ ಈ ಬಾರಿ ಚೆನ್ನೈ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಯೂಸುಫ್ ಪಠಾಣ್
2007 ವಿಶ್ವಕಪ್ನಲ್ಲಿ ಫೈನಲ್ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ್ದ ಯೂಸುಫ್ ಪಠಾಣ್, ಆ ಬಳಿಕ ಟಿ20 ಕ್ರಿಕೆಟ್ನಲ್ಲಿ ಹಿಂತಿರುಗಿ ನೋಡಿಲ್ಲ. 2019 ರವರೆಗೆ ಐಪಿಎಲ್ನಲ್ಲೂ ಕಾಣಿಸಿಕೊಂಡಿದ್ದ ಪಠಾಣ್, ಇದೀಗ ನಿವೃತ್ತಿ ಘೋಷಿಸಿದ್ದಾರೆ. ಅಲ್ಲದೆ ಅಬುಧಾಬಿ ಟಿ10 ಲೀಗ್ -2021 ರಲ್ಲಿ ಮರಾಠಾ ಅರೇಬಿಯನ್ಸ್ ಪರ ಆಡಲಿದ್ದಾರೆ.
ದಿನೇಶ್ ಕಾರ್ತಿಕ್
ಕಾರ್ತಿಕ್ ಪ್ರಸ್ತುತ ಸಕ್ರಿಯ ಕ್ರಿಕೆಟಿಗರಾಗಿದ್ದಾರೆ. ಐಪಿಎಲ್ನಲ್ಲಿ ಕೆಕೆಆರ್ ತಂಡವನ್ನು ಪ್ರತಿನಿಧಿಸುತ್ತಿರುವ ಡಿಕೆ, ಕಮೆಂಟೇಟರ್ ಆಗಿ ಕೂಡ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.
ಅಜಿತ್ ಅಗರ್ಕರ್
ಅಂದಿನ ಟಿ20 ತಂಡದ ಅತ್ಯಂತ ಅನುಭವಿ ಬೌಲರ್ ಆಗಿ ಅಗರ್ಕರ್ ಕಾಣಿಸಿಕೊಂಡಿದ್ದರು. ಇದೀಗ ಅಗರ್ಕರ್ ಸ್ಟಾರ್ ಕಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇರ್ಫಾನ್ ಪಠಾಣ್
ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠರಾಗಿದ್ದ ಆಲ್ರೌಂಡರ್ ಇರ್ಫಾನ್ ಪಠಾಣ್, ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದಾರೆ. ಜೊತೆಗೆ ಕಾಮೆಂಟರಿಯಲ್ಲಿ ನಿರತರಾಗಿದ್ದಾರೆ.
ರುದ್ರ ಪ್ರತಾಪ್ ಸಿಂಗ್
ಆರ್ಪಿ ಸಿಂಗ್ ಕೂಡ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2018 ರಲ್ಲಿ ನಿವೃತ್ತರಾಗಿದ್ದ ಆರ್ಪಿ ಸಿಂಗ್ ಅಬುಧಾಬಿ ಟಿ10 ಲೀಗ್ನಲ್ಲಿ ಆಡಲು ಇಚ್ಛಿಸಿದ್ದಾರೆ.
ಪಿಯೂಷ್ ಚಾವ್ಲಾ
ಪಿಯೂಷ್ ಚಾವ್ಲಾ ಕೂಡ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಈಗಲೂ ಕ್ರಿಕೆಟ್ ಮುಂದುವರೆಸಿರುವ ಚಾವ್ಲಾ ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ.
ಹರ್ಭಜನ್ ಸಿಂಗ್
ಅಂದಿನ ತಂಡದ ಅನುಭವಿ ಸ್ಪಿನ್ನರ್ ಎಂದರೆ ಅದು ಹರ್ಭಜನ್ ಸಿಂಗ್. ಈ ಬಾರಿ ಕೆಕೆಆರ್ ತಂಡದಲ್ಲಿ ಕಾಣಿಸಿಕೊಂಡಿದ್ದ ಭಜ್ಜಿ, ಇನ್ನೂ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿಲ್ಲ ಎಂಬುದು ವಿಶೇಷ.