ಚಾಮರಾಜನಗರ : 2 ವರ್ಷ 5 ತಿಂಗಳ ಪುಟ್ಟ ಬಾಲಕ ಭಾರತದ ಎಲ್ಲಾ ರಾಜ್ಯದ ರಾಜಧಾನಿಗಳನ್ನು ಪಟಾ ಪಟಾಂತ ಹೇಳೋ ಮೂಲಕ ಭಾರಿ ಸುದ್ದಿಯಾಗಿದ್ದಾನೆ.
ಹೌದು, ಚಾಮರಾಜನಗರದ ಬೊಮ್ಮನಹಳ್ಳಿ ಗ್ರಾಮದ ಪ್ರಭುಸ್ವಾಮಿ ಹಾಗೂ ಭುವನೇಶ್ವರಿ ದಂಪತಿಯ ಪುತ್ರ ವೇದಿಕ್ ಎಂಬ ಬಾಲಕ ಎಲ್ಲಾ ರಾಜ್ಯದ ರಾಜಧಾನಿಗಳ ಹೆಸರನ್ನು ಹೇಳುವಲ್ಲಿ ಯಶಸ್ವಿಯಾಗಿದ್ದಾನೆ. ಸದ್ಯ ಬಾಲಕ ರಾಜಧಾನಿಗಳ ಹೆಸರನ್ನು ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತೊದಲು ಮಾತಾಡುತ್ತಿರುವ ಈ ಪುಟ್ಟ ಬಾಲಕ ರಾಜ್ಯದ ರಾಜಧಾನಿಗಳ ಹೆಸರನ್ನು ಅಸ್ಪಷ್ಟವಾಗಿಯೇ ಹೇಳುತ್ತಾನೆ. ಬಾಲಕನ ಈ ಮಾತುಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರನ್ನು ಆಕರ್ಷಿಸಿದ್ದಾನೆ.
ವೇದಿಕ್ ಸಣ್ಣ ಮಗುವಿದ್ದಾಗಲೇ ಪೋಷಕರು ರಾಜಧಾನಿಗಳ ಹೆಸರನ್ನು ಹೇಳಿಕೊಡಲು ಆರಂಭಿಸಿದ್ದರು. ಹೀಗಾಗಿ ಬಾಲಕ ಇಂದು ಇಷ್ಟೊಂದು ಸುಲಲಿತವಾಗಿ ರಾಜಧಾನಿಗಳ ಹೆಸರನ್ನು ಹೇಳಬಲ್ಲವನಾಗಿದ್ದಾನೆ.
ಒಟ್ಟಿನಲ್ಲಿ ಸದ್ಯ ವೇದಿಕ್ ತನ್ನ ತೊದಲು ಮಾತುಗಳಿಂದ ಸಾಮಾಜಿಕ ಜಾಲತಾಣಿಗರ ಮನಸ್ಸನ್ನು ಗೆದ್ದಿದ್ದು, ತನ್ನ ಬುದ್ಧಿವಂತಿಕೆಯಿಂದ ಎಲ್ಲರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿದ್ದಾನೆ.