ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ಪ್ರೋತ್ಸಾಹ ಧನ : ಎಸ್.ಟಿ ಸೋಮಶೇಖರ್

ಮಂಡ್ಯ: ಕೊರೋನಾ ಸೋಂಕು ಹೆಚ್ಚಳ ತಡೆಯಲು ಮಾಡಲಾದ ಲಾಕ್‍ಡೌನ್ ನಂತರ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ 42,500 ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ಪ್ರೋತ್ಸಾಹ ಧನ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಮೈಸೂರಿನಲ್ಲಿ ಆಶಾ ಪ್ರೋತ್ಸಾಹ ಧನ 3 ಸಾವಿರ ರೂಪಾಯಿ ಪ್ರೋತ್ಸಾಹ ಧನ ವಿತರಣೆ ಕರ‍್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರೋತ್ಸಾಹ ಧನ ನೀಡುವ ಬಗ್ಗೆ ಸಿಎಂ ಯಡಿಯೂರಪ್ಪ ಅವರ ಸಲಹೆ ಮೇರೆಗೆ 12.7 ಕೋಟಿ ರೂ.ಗಳನ್ನು ಸಹಕಾರ ಇಲಾಖೆಯಿಂದಲೇ ಸಂಪೂರ್ಣವಾಗಿ ಭರಿಸಿ ವಿತರಣೆ ಮಾಡುತ್ತಿದ್ದೇವೆ. ಪ್ರತಿ ಜಿಲ್ಲೆಯಲ್ಲಿ ಲಾಭದಲ್ಲಿರುವ ಸಹಕಾರ ಬ್ಯಾಂಕ್ ಗಳಿಂದ ಹಣ ಸಂಗ್ರಹಿಸಿ ಆಯಾ ಜಿಲ್ಲೆಗಳಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ಕೊಡುವ ಕೆಲಸವನ್ನು ಮಾಡುತ್ತಿದ್ದೇವೆ. ಎಲ್ಲರಿಗೂ ಪ್ರೋತ್ಸಾಹ ಧನ ತಲುಪಬೇಕಿದ್ದು, ಇದಕ್ಕೋಸ್ಕರ ನಾನೇ ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇನೆ. ಮಂಡ್ಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡುವ ಸಲುವಾಗಿ ಹಾಲು ಒಕ್ಕೂಟ ಹಾಗೂ ಡಿಸಿಸಿ ಬ್ಯಾಂಕ್ 41 ಲಕ್ಷ ರೂಪಾಯಿ ಕೊಟ್ಟಿದ್ದು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸೋಮಶೇಖರ್ ತಿಳಿಸಿದರು.
ಸ್ತ್ರೀಶಕ್ತಿ ಸಂಘಗಳು ಹಾಗೂ ಸ್ವಸಹಾಯ ಸಂಘಗಳ ಮಾದರಿಯಲ್ಲಿ ಆಶಾ ಕಾರ್ಯಕರ್ತೆಯರಿಗೂ ಸಾಲ ಕೊಡುವ ನಿಟ್ಟಿನಲ್ಲಿ ಚಿಂತನೆಗಳು ನಡೆಯುತ್ತಿದ್ದು, ಶೀಘ್ರದಲ್ಲಿ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದರು.
ಕೊರೋನಾ ಜೊತೆಯಲ್ಲಿ ಜೀವನ ಎಂಬುದನ್ನು ನಾವು ತಿಳಿಯಲೇಬೇಕು. ಅದರ ಜೊತೆಯಲ್ಲೇ ರೋಗ ಬಾಧಿಸದಂತೆ ಎಚ್ಚರಿಕೆ ವಹಿಸಬೇಕು. ಇದಕ್ಕೆ ಪ್ರಮುಖವಾಗಿ ನಾವು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ನಾವು ಜನಪ್ರತಿನಿಧಿಗಳೇ ಅಂತರ ಕಾಯ್ದುಕೊಳ್ಳದಿದ್ದರೆ ಕಷ್ಟವಾಗುತ್ತದೆ. ಇದಕ್ಕೆ ಜನತೆ ಸಹ ಸಹಕರಿಸಬೇಕು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This