ಬೆಂಗಳೂರಿನ ಜರಗನಹಳ್ಳಿಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಸುಧಾ ಮತ್ತು ಸಿದ್ದಿಚಾರಿ ಎಂಬ ದಂಪತಿ ಚೀಟಿ ಹಣದ ಹೆಸರಿನಲ್ಲಿ ಬರೋಬ್ಬರಿ 40 ಕೋಟಿ ರೂ. ಸಂಗ್ರಹಿಸಿ 600ಕ್ಕೂ ಹೆಚ್ಚು ಜನರಿಗೆ ವಂಚಿಸಿ ಪರಾರಿಯಾಗಿದ್ದಾರೆ.
ಕಳೆದ 20 ವರ್ಷಗಳಿಂದ ಜರಗನಹಳ್ಳಿಯಲ್ಲಿ ವಾಸವಾಗಿದ್ದ ಈ ದಂಪತಿ, ಸ್ಥಳೀಯರ ವಿಶ್ವಾಸ ಗಳಿಸಿ ಚೀಟಿ ವ್ಯವಹಾರ ನಡೆಸುತ್ತಿದ್ದರು. ಆರಂಭದಲ್ಲಿ ಚೀಟಿ ಹಣವನ್ನು ನಿಯಮಿತವಾಗಿ ನೀಡುವ ಮೂಲಕ ನಂಬಿಕೆ ಹುಟ್ಟಿಸಿದ್ದ ಇವರು, 600ಕ್ಕೂ ಹೆಚ್ಚು ಜನರಿಂದ ತಲಾ 5 ರಿಂದ 10 ಲಕ್ಷ ರೂ. ಗಳವರೆಗೂ ಹಣವನ್ನು ಪಡೆದಿದ್ದರು.
ಆದರೆ, ಕಳೆದ ಒಂದು ವರ್ಷದಿಂದ ಹಣ ನೀಡದೆ ಸತಾಯಿಸುತ್ತಿದ್ದ ಈ ದಂಪತಿ, ಜೂನ್ 3 ರಂದು ದಿಢೀರನೇ ನಾಪತ್ತೆಯಾಗಿದ್ದಾರೆ. ಇದರಿಂದ ಆತಂಕಗೊಂಡ ಹೂಡಿಕೆದಾರರು ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದು, ದಂಪತಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಬೃಹತ್ ವಂಚನೆ ಪ್ರಕರಣವು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಹೂಡಿಕೆದಾರರು ತಮ್ಮ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.








