ನವದೆಹಲಿ : ಕಾಂಗ್ರೆಸ್ ಪಕ್ಷ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಇಂದಿಗೆ 45 ವರ್ಷ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸರಣಿ ಟ್ವೀಟ್‌ಗಳ ಮೂಲಕ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಮಿತ್ ಶಾ ಟ್ವೀಟ್ ನಲ್ಲಿ.. “1975ರ ಜೂನ್ 25-26ರ ಮಧ್ಯರಾತ್ರಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ಅಂದು ಕಾಂಗ್ರೆಸ್ ದೇಶದ ತಳಸಮುದಾಯ ಮತ್ತು ಬಡವರ ಮೂಲಭೂತ ಹಕ್ಕುಗಳನ್ನು ದಮನಗೊಳಿಸಿತ್ತು. ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿದ್ದ ಟೀಕಾಕಾರರನ್ನು ಜೈಲಿಗಟ್ಟಿತ್ತು. ಅಂದು ದೇಶದ ನ್ಯಾಯಾಂಗ, ಕಾರ್ಯಾಂಗ, ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಬೆಲೆಯೇ ಇಲ್ಲದಂತಹಾ ಪರಿಸ್ಥಿತಿ ನಿರ್ಮಾಣವಾಗಿತ್ತು” ಎಂದು ಕುಟುಕಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಕಾಂಗ್ರೆಸ್ ನ ಕುಟುಂಬ ರಾಜಕೀಯದ ಬಗ್ಗೆ ಅಮಿತ್ ಶಾ ಬರೆದುಕೊಂಡಿದ್ದು, ತುರ್ತು ಪರಿಸ್ಥಿತಿ ಘೋಷಣೆ ಬಳಿಕ “ದೇಶದ ಲಕ್ಷಾಂತರ ಜನರ ಹೋರಾಟದ ಫಲದಿಂದ ಈ ತುರ್ತು ಪರಿಸ್ಥಿತಿ ಕೊನೆಯಾಯಿತು. ಭಾರತದಲ್ಲಿ ಪ್ರಜಾಪ್ರಭುತ್ವ ಪುನಃಸ್ಥಾಪನೆಯಾಯಿತು. ಆದರೆ, ಕಾಂಗ್ರೆಸ್ ನ ದರ್ಪ ಮಾತ್ರ ಕಡಿಮೆಯಾಗಲಿಲ್ಲ. ಒಂದು ಕುಟುಂಬದ ಹಿತಾಸಕ್ತಿಯೂ ರಾಷ್ಟ್ರ ಮತ್ತು ಪಕ್ಷದ ಹಿತಾಸಕ್ತಿ ಆಗಿತ್ತು. ಅಂದಿನಿಂದಲೂ ಇಂದಿನವರೆಗೂ ಕಾಂಗ್ರೆಸ್ ನಲ್ಲಿ ಈ ಕುಟುಂಬ ರಾಜಕಾರಣ ಹಾಗೆಯೇ ಇದೆ ಎಂದು ಕೆಂಡಕಾರಿದ್ದಾರೆ.
ಇನ್ನು, ಮತ್ತೊಂದು ಟ್ವೀಟ್ ನಲ್ಲಿ ಅಮಿತ್ ಶಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಬಗ್ಗೆ ಉಲ್ಲೇಖಿಸಿದ್ದು, ಈ ಸಭೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು ದೇಶದ ಗಂಭೀರ ಸಮಸ್ಯೆಗಳನ್ನು ಉಲ್ಲೀಖಿಸಿದ್ದರು. ಆದರೆ, ವರಿಷ್ಠರು ಮಾತ್ರ ಪಕ್ಷದ ನಾಯಕರ ವಿರುದ್ಧ ಕೂಗಾಡುತ್ತಿದ್ದರು. ಇದರಿಂದ ಪಕ್ಷದ ಮುಖ್ಯ ವಕ್ತಾರರೊಬ್ಬರನ್ನು ಕಿತ್ತೊಗಿದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಈಗ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿರುವ ಶಾ, ಈ ಕುರಿತ ಎರಡು ಪತ್ರಿಕೆಗಳ ವರದಿಗಳನ್ನು ತಮ್ಮ ಟ್ವೀಟ್ ನಲ್ಲಿ ಟ್ಯಾಗ್ ಮಾಡಿದ್ದಾರೆ.
ಮುಂದುವರಿದು ತಮ್ಮ ಟ್ವೀಟ್ ಗಳಲ್ಲಿ ಕಾಂಗ್ರೆಸ್ ನಾಯಕರನ್ನು ಅಮಿತ್ ಶಾ ತರಾಟೆಗೆ ತೆಗೆದುಕೊಂಡಿದ್ದು, ದೇಶದ ಪ್ರಮುಖ ವಿರೋಧ ಪಕ್ಷವಾಗಿ ಕಾಂಗ್ರೆಸ್ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುವ ಸಮಯವಿದು. ಕಾಂಗ್ರೆಸ್ ವರಿಷ್ಠರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿದ್ದ ಮನಸ್ಥಿತಿಯೇ ಇನ್ನೂ ಯಾಕೆ ಉಳಿದಿದೆ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಗಾಂಧಿ ಕುಟುಂಬಕ್ಕೆ ಸೇರದ ಕಾಂಗ್ರೆಸ್ ನಾಯಕರು ಯಾಕೇ ಈಗಲೂ ದನಿಯೆತ್ತಲು ಹೆದರುತ್ತಾರೆ..? ಕಾಂಗ್ರೆಸ್ ಯಾಕೇ ಹತಾಶೆಗೆ ಒಳಗಾಗಿದೆ..? ದೇಶದ ಜನತೆಯ ಸಂಪರ್ಕದಲ್ಲಿಲ್ಲದ ಕಾಂಗ್ರೆಸ್ ರಾಜಕಾರಣ ಅಂತ್ಯವಾಯ್ತೇ ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ ಎಂದು ಬರೆದುಕೊಂಡಿದ್ದಾರೆ.