ರಾಷ್ಟ್ರದಲ್ಲಿನ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಆಗಸ್ಟ್ 6 ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಇನ್ನು ಮುಂದೆ ರೈಲ್ವೆ ಸೇವೆಯು ಉತ್ತಮ ಸೇವೆಯಾಗಲಿದೆ. ರೈಲು ನಿಲ್ದಾಣಗಳಲ್ಲಿ (Railway stations) ವಿಶ್ವ ದರ್ಜೆಯ ಸೌಕರ್ಯಗಳನ್ನು ಒದಗಿಸುವ ಪ್ರಾಮುಖ್ಯತೆ ನೀಡಲಾಗುವುದು. ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ದೇಶಾದ್ಯಂತ 1309 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ಪ್ರಾರಂಭಿಸಲಾಯಿತು. ಈ ಯೋಜನೆಯ ಭಾಗವಾಗಿ 508 ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ಮಾಡಲಿದ್ದಾರೆ.
ಈ ನಿಲ್ದಾಣಗಳನ್ನು 24,470 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಮರು ಅಭಿವೃದ್ಧಿಗೊಳಿಸಲಾಗುತ್ತಿದೆ. 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 508 ನಿಲ್ದಾಣಗಳ ಪೈಕಿ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55, ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಪಶ್ಚಿಮ ಬಂಗಾಳದಲ್ಲಿ 37, ಮಧ್ಯಪ್ರದೇಶದಲ್ಲಿ 34, ಅಸ್ಸಾಂನಲ್ಲಿ 32, ಒಡಿಶಾದಲ್ಲಿ 25, ಪಂಜಾಬ್ನಲ್ಲಿ 22, ಗುಜರಾತ್ ಮತ್ತು ತೆಲಂಗಾಣದಲ್ಲಿ ತಲಾ 21, ಜಾರ್ಖಂಡ್ನಲ್ಲಿ 20, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 18, ಹರ್ಯಾಣದಲ್ಲಿ 15, ಕರ್ನಾಟಕದಲ್ಲಿ 13 ನಿಲ್ದಾಣಗಳ ಅಭಿವೃದ್ಧಿಗೆ ಚಾಲನೆ ಸಿಗಲಿದೆ.








