ಬೆಂಗಳೂರು: ಐಪಿಎಲ್ (IPL 2025) ಹಂಗಾಮಿಗೆ ಭರ್ಜರಿ ತಾಲೀಮು ನಡೆಯುತ್ತಿದ್ದು, ಮೆಗಾ ಹರಾಜು (Mega Auction) ಪ್ರಕ್ರಿಯೆಗೂ ಮುನ್ನ ಬಿಸಿಸಿಐ ಹಲವು ನಿಯಮ ಘೋಷಿಸಿದೆ.
ಐಪಿಎಲ್ ಮಂಡಳಿ ಸಭೆಯಲ್ಲಿ 2025-27ರ ವರೆಗಿನ ಐಪಿಎಲ್ ನಿಯಮಾವಳಿಗಳ ಕುರಿತು ಬಿಸಿಸಿಐ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದೆ. ಫ್ರಾಂಚೈಸಿಯೊಂದು ಆರ್‌ಟಿಎಂ ಕಾರ್ಡ್‌ನೊಂದಿಗೆ 6 ಆಟಗಾರರನ್ನು ಉಳಿಸಿಕೊಳ್ಳಬಹುದು. ಫ್ರಾಂಚೈಸಿ 5 ಕ್ಯಾಪ್ಡ್ (ಭಾರತೀಯ ಮತ್ತು ಸಾಗರೋತ್ತರ) ಮತ್ತು 2 ಅನ್ ಕ್ಯಾಪ್ಡ್ ಪ್ಲೇಯರ್ ಗಳನ್ನು ಹೊಂದಬಹುದು. ಪರ್ಸ್ ಮೊತ್ತವನ್ನು 100 ಕೋಟಿ ರೂ. ನಿಂದ 120 ಕೋಟಿ ರೂ. ಹೆಚ್ಚಿಸಲಾಗಿದೆ.
ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪಂದ್ಯ ಶುಲ್ಕವನ್ನು ಪರಿಚಯಿಸಲಾಗಿದೆ. ಈ ಮೂಲಕ ಪ್ರತಿ ಆಟಗಾರನು ಲೀಗ್ ಪಂದ್ಯವೊಂದಕ್ಕೆ 7.5 ಲಕ್ಷ ರೂ. ಹೆಚ್ಚುವರಿ ಪಡೆದುಕೊಳ್ಳಲಿದ್ದಾರೆ. ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ವಿದೇಶಿ ಆಟಗಾರರು ಮೆಗಾ ಹರಾಜಿಗೆ ನೋಂದಣಿ ಮಾಡಿಕೊಳ್ಳಬೇಕು.
ಇಲ್ಲದಿದ್ದರೆ, ಮುಂದಿನ ವರ್ಷ ಅವರು ಹರಾಜಿನಲ್ಲಿ ನೋಂದಾಯಿಸಲು ಅನರ್ಹರಾಗುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿ 5 ವರ್ಷ ಪೂರೈಸಿದ ಭಾರತೀಯ ಕ್ರಿಕೆಟ್ ಆಟಗಾರ ಅನ್‌ಕ್ಯಾಪ್ಡ್ ಪ್ಲೇಯರ್ ಆಗುತ್ತಾರೆ. ಇದು ಭಾರತೀಯ ಆಟಗಾರರಿಗೆ ಮಾತ್ರ ಅನ್ವಯಿಸುತ್ತದೆ. ಹೀಗಾಗಿ ಈ ಬಾರಿ ಐಪಿಎಲ್ ಹಂಗಾಮ ರಂಗು ಪಡೆಯವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಲಾಗುತ್ತಿದೆ.