ಬೆಂಗಳೂರು: ಕಳೆದ 10 ತಿಂಗಳಿಂದ ಹೆಮ್ಮಾರಿ ಕೊರೊನಾ ಅಬ್ಬರಕ್ಕೆ ನಲುಗಿದ್ದ ರಾಜ್ಯದ ಜನತೆ ಕೊಂಚ ನಿಟ್ಟುಸಿರು ಬಿಡುವಂತ ಸುದ್ದಿ ಬಂದಿದೆ. ಪುಣೆಯ ಸೀರಮ್ ಕೇಂದ್ರದಿಂದ ರಾಜ್ಯಕ್ಕೆ ಕೋವಿಶೀಲ್ಡ್ ಲಸಿಕೆ ಆಗಮಿಸಿದ್ದು, ಬೆಂಗಳೂರಿನ ಆನಂದರಾವ್ ವೃತ್ತದಲ್ಲಿರುವ ಆರೋಗ್ಯ ಇಲಾಖೆಯ ಕೋಲ್ಡ್ ಸ್ಟೋರೇಜ್ ಲಸಿಕಾ ಕೇಂದ್ರಕ್ಕೆ ರವಾನಿಸಲಾಗಿದೆ.

ಪುಣೆಯಿಂದ ಸ್ಪೈಸ್ಜೆಟ್ 495 ವಿಮಾನದಲ್ಲಿ 54 ಬಾಕ್ಸ್ ಗಳಲ್ಲಿ 6 ಲಕ್ಷದ 47,500 ಡೋಸ್ ಕೋವಿಶೀಲ್ಡ್ ಲಸಿಕೆ ರವಾನಿಸಲಾಗಿತ್ತು. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಮಾರು ಮಧ್ಯಾಹ್ನ 12.30ರ ಸುಮಾರಿಗೆ ವಿಮಾನ ಆಗಮಿಸಿತು. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಆರೋಗ್ಯ ಇಲಾಖೆಯ ಕಂಟೈನರ್ ಗಳಿಗೆ ಕೊರೊನಾ ಲಸಿಕೆ ಇದ್ದ ಬಾಕ್ಸ್ ಗಳನ್ನು ಸ್ಥಳಾಂತರಿಸಲಾಯಿತು.

ಕೆಂಪೇಗೌಡ ಏರ್ಪೋರ್ಟ್ನಿಂದ ಆನಂದರಾವ್ ವೃತ್ತದಲ್ಲಿರುವ ಕೋಲ್ಡ್ ಸ್ಟೋರೇಜ್ ಕೇಂದ್ರಕ್ಕೆ ಲಸಿಕೆ ಸಾಗಿಸುವ ಕಂಟೇನರ್ ನಲ್ಲಿ ತರಲಾಗಿದೆ. ಆನಂದರಾವ್ ವೃತ್ತದ ಸ್ಟೋರೇಜ್ ಕೇಂದ್ರದಲ್ಲಿ ಲಸಿಕೆ ಇಳಿಸಿದ ನಂತರ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೆ ಲಸಿಕೆ ರವಾನಿಸಲಾಗುತ್ತಿದೆ.

ಜನವರಿ 16ರಿಂದ ರಾಜ್ಯಾದ್ಯಂತ ಕೊರೊನಾ ಲಸಿಕೆ ಅಭಿಯಾನ ಆರಂಭವಾಗುತ್ತಿದ್ದು, ಮೊದಲ ಹಂತದಲ್ಲಿ 16 ಲಕ್ಷ ಕೊರೊನಾ ವಾರಿಯರ್ಸ್ಗಗೆ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಸಂಗ್ರಹಕ್ಕೆ ರಾಜ್ಯ ಆರೋಗ್ಯ ಇಲಾಖೆ ಕಳೆದ ಒಂದು ತಿಂಗಳಿಂದ ಸಿದ್ಧತೆ ನಡೆಸಿದ್ದು, ಲಸಿಕೆ ವಿತರಣೆ ಸಂಬಂಧ ಎರಡು ಬಾರಿ ಡ್ರೈರನ್ ಮಾಡಲಾಗಿದೆ. ವೈದ್ಯರು, ನರ್ಸ್ಗಳು, ಆರೋಗ್ಯ ಕಾರ್ಯಕರ್ತರು, ಪೊಲೀಸರು, ರಕ್ಷಣಾ ಸಿಬ್ಬಂದಿ ಸೇರಿದಂತೆ 16 ಲಕ್ಷ ಮಂದಿಗೆ ಮೊದಲ ಹಂತದ ಕೊರೊನಾ ಲಸಿಕೆ ನೀಡಲು ಸಿದ್ಧತೆ ಮಾಡಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








