ಬೆಂಗಳೂರು : ಕಾಂಗ್ರೆಸ್ ಸರ್ಕಾರ ತಾನು ಮಾತು ಕೊಟ್ಟಂತೆ 5 ಗ್ಯಾರಂಟಿಗಳನ್ನು (Guarantee Scheme) ಷೋಷಿಸಿದೆ. ಸದ್ಯ ಈ ಯೋಜನೆಗಳನ್ನು ಜಾರಿಗೊಳಿಸಲು 59 ಸಾವಿರ ಕೋಟಿ ರೂ. ವಾರ್ಷಿ ವೆಚ್ಚವಾಗಲಿದೆ. ಆದರೆ, ನಾಡಿನ ಜನರ ಕಲ್ಯಾಣ ನಮಗೆ ಮುಖ್ಯ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
5 ಗ್ಯಾರಂಟಿ ಯೋಜನೆಗಳಿಗೆ ತಗಲುವ ಖರ್ಚು ಎಷ್ಟು? ಈ ಯೋಜನೆ ಜಾರಿಗೆ ಹಣ ಎಲ್ಲಿಂದ ತರುತ್ತೀರಿ ಎಂದು ಎಲ್ಲರೂ ಪ್ರಶ್ನೆ ಮಾಡುತ್ತಿದ್ದರು. ಸದ್ಯ ಇದಕ್ಕೆಲ್ಲ ಸಿಎಂ ಉತ್ತರ ನೀಡಿದ್ದಾರೆ. ಆದರೆ ಇಷ್ಟೊಂದು ಹಣವನ್ನು ಹೇಗೆ ಹೊಂದಾಣಿಕೆ ಮಾಡಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ರಾಜ್ಯದಲ್ಲಿ ಪಎಸ್ಸಿ, ಎಸ್ಟಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಿರುವುದನ್ನು ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ಸೇರಿಸಲು ನಾವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿ (BJP) ಸರ್ಕಾರವು ತರಾತುರಿಯಲ್ಲಿ ಮೀಸಲಾತಿ ಹೆಚ್ಚಳ ಮಾಡಿರುವುದು ಚುನಾವಣಾ ಗಿಮಿಕ್. ಒಳ ಮೀಸಲಾತಿ ಕಲ್ಪಿಸುವ ನೆಪದಲ್ಲಿ ಹಿಂದಿನ ಸರ್ಕಾರ ಗೊಂದಲ ಸೃಷ್ಟಿಸಿದೆ. ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ ಮೀಸಲಾತಿ ಕಲ್ಪಿಸುವಂತೆ ತಾವು ನೀಡಿದ್ದ ಸಲಹೆಯನ್ನು ನಿರ್ಲಕ್ಷಿಸಿದ ಪರಿಣಾಮ ವಿವಿಧ ಸಮುದಾಯಗಳ ವಿರೋಧ ಎದುರಿಸುವಂತಾಯಿತು ಎಂದು ಆರೋಪಿಸಿದ್ದಾರೆ.
ರಾಜ್ಯದ ಜನರು ಕಾಂಗ್ರೆಸ್ (Congress) ಪಕ್ಷಕ್ಕೆ ಅವಕಾಶ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಯಾವತ್ತೂ ಜಾತ್ಯತೀತ ಪಕ್ಷವಾಗಿದ್ದು, ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ, ಸಾಮಾಜಿಕ ನ್ಯಾಯದ ನಿಲುವಿನಲ್ಲಿ ರಾಜಿ ಇಲ್ಲ. ನಮ್ಮ ಸರ್ಕಾರವು ಮೀಸಲಾತಿಯ ಎಲ್ಲ ಗೊಂದಲ ಬಗೆಹರಿಸುತ್ತದೆ ಎಂದು ಹೇಳಿದ್ದಾರೆ.
ಜಾತಿವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು 162 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಂಡಿತ್ತು. ಸಮೀಕ್ಷೆಯ ವರದಿಯನ್ನು ಸ್ವೀಕರಿಸಲು ಹಿಂದಿನ ಸರ್ಕಾರಗಳು ಹಿಂದೇಟು ಹಾಕಿದವು. ನಮ್ಮ ಸರ್ಕಾರ ಈ ವರದಿಯನ್ನು ಸ್ವೀಕರಿಸಲಿದೆ. ವಸ್ತು ಸ್ಥಿತಿ ಧರಿಸಿ, ಜನರಿಗೆ ಶಿಕ್ಷಣ, ಉದ್ಯೋಗ, ಉದ್ಯಮ ಸೇರಿದಂತೆ ವಿವಿಧ ವಲಯಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ. ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಮೊದಲಾದ ಕಾರ್ಯಕ್ರಮಗಳನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿತ್ತು. ಸದ್ಯ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ. ಇದಕ್ಕೆ ಸುಮಾರು 59 ಸಾವಿರ ಕೋಟಿ ರೂ. ವಾರ್ಷಿಕ ವೆಚ್ಚ ತಗುಲಲಿದೆ. ಆದರೆ, ನಮಗೆ ಎಲ್ಲರ ಕಲ್ಯಾಣ ಮುಖ್ಯ ಎಂದು ಹೇಳಿದ್ದಾರೆ.








