55 ರನ್ಗೆ ವೆಸ್ಟ್ ಇಂಡೀಸ್ ಪ್ಯಾಕಪ್, ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿದ ಹಾಲಿ ಚಾಂಪಿಯನ್ಸ್ England saaksha tv
ವೆಸ್ಟ್ ಇಂಡೀಸ್ ಬ್ಯಾಟ್ಸ್ಮನ್ಗಳ ಸ್ಕೋರ್ ಮೊಬೈಲ್ ನಂಬರ್ ಗಳಂತೆ ಕಾಣುತ್ತಿತ್ತು. ಇಂಗ್ಲೆಂಡ್ ಬೌಲರ್ ಗಳ ರನ್ ಮತ್ತು ವಿಕೆಟ್ ಕಾಲಂ ಯಾವುದೋ ಫುಟ್ಬಾಲ್ ಮ್ಯಾಚ್ ನ ಸ್ಕೋರ್ ತರಹ ಇತ್ತು. ಕ್ರಿಸ್ ಗೇಲ್ ಒಬ್ಬರನ್ನು ಬಿಟ್ಟರೆ ಉಳಿದ 9 ಬ್ಯಾಟ್ಸ್ ಮನ್ ಗಳು ಒಂದಂಕಿ ವೀರರಾದರು. ವೆಸ್ಟ್ ಇಂಡೀಸ್ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಅನುಭವಿಸಿತು.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆರಿಸಿಕೊಂಡಿತು. 2ನೇ ಓವರ್ ನಲ್ಲಿ ಕ್ರಿಸ್ ವೋಕ್ಸ್ ಎವಿನ್ ಲೆವಿಸ್ ಆಟಕ್ಕೆ ಮಂಗಳ ಹಾಡಿದರು. ನಂತರ ಮೊಯಿನ್ ಅಲಿ ಲೆಂಡ್ಲ್ ಸಿಮನ್ಸ್ ಮತ್ತು ಶಿಮ್ರನ್ ಹೆಟ್ಮಯರ್ ವಿಕೆಟ್ ಪಡೆದರು. ಟೈಮಲ್ ಮಿಲ್ಸ್ ಅಪಾಯಕಾರಿ ಕ್ರಿಸ್ ಆಟವನ್ನು 13ಕ್ಕೆ ನಿಲ್ಲಿಸಿದರು. ಇಲ್ಲಿಂದ ವೆಸ್ಟ್ ಇಂಡೀಸ್ ಚೇತರಿಸಿಕೊಳ್ಳಲೇ ಇಲ್ಲ.
ಕ್ರಿಸ್ ಜೊರ್ಡಾನ್ ಬ್ರಾವೋ ವಿಕೆಟ್ ಪಡೆದರೆ ಮಿಲ್ಸ್ ಪೂರನ್ ವಿಕೆಟ್ ಪಡೆದರು. ಕೊನೆಯ 4 ವಿಕೆಟ್ ಗಳನ್ನು ಆದಿಲ್ ರಶೀದ್ ಕೇವಲ 2 ರನ್ ನೀಡಿ ಪಡೆದರು. ವೆಸ್ಟ್ ಇಂಡೀಸ್ 14. 2 ಓವರುಗಳಲ್ಲಿ 55 ರನ್ಗಳಿಗೆ ಆಲೌಟ್ ಆಯಿತು. ರಶೀದ್ 2 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.
ಸುಲಭ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಪವರ್ ಪ್ಲೇ ನಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ಜೇಸನ್ ರಾಯ್ 11 ರನ್ ಗಳಿಸಿದರೆ, ಬೇರ್ ಸ್ಟೋವ್ 9 ರನ್ ಗಳಿಸಿ ಔಟಾದರು. ಮೊಯಿನ್ ಅಲಿ 3 ರನ್ ಗಳಿಸಿ ರನೌಟ್ ಬಲೆಯಲ್ಲಿ ಬಿದ್ದರು. ಲಿಯಂ ಲಿವಿಂಗ್ ಸ್ಟೋನ್ ಹೊಸೈನಿಯ ಅದ್ಭುತ ಕ್ಯಾಚ್ ಗೆ ಬಲಿಯಾದರು.
ಆದರೆ ಜೊಸ್ ಬಟ್ಲರ್ ಮತ್ತು ಇಯಾನ್ ಮೊರ್ಗಾನ್ ಪಂದ್ಯ ಮುಗಿಸಿದರು. ಬಟ್ಲರ್ ಅಜೇಯ 24 ರನ್ಗಳಿಸಿದರೆ, ಮೊರ್ಗಾನ್ ಅಜೇಯ 7 ರನ್ಗಳಿಸಿದರು. ಇಂಗ್ಲೆಂಡ್ 8.2 ಓವರುಗಳಲ್ಲಿ ಗುರಿ ತಲುಪಿ 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು.









