ಸೈಕಲ್ ಏರಿದ ಭಾರತದ ಅತಿ ಎತ್ತರದ ಮನುಷ್ಯ
ನವದೆಹಲಿ : ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈ ಬಾರಿ ಸಮಾಜವಾದಿ ಪಾರ್ಟಿ ತುಸು ಜೋರಾಗಿಯೇ ಚುನಾವಣೆಗೆ ತಯಾರಿಗೆ ಆರಂಭಿಸಿದೆ.
ಯೋಗಿ ನೇತೃತ್ವದ ಬಿಜೆಪಿಗೆ ಟಕ್ಕರ್ ನೀಡಲು ಪ್ಲಾನ್ ಮಾಡುತ್ತಿರುವ ಅಖಿಲೇಶ್ ಯಾವದ್ ನೇತೃತ್ವದ ಸಮಾಜವಾದಿ ಪಾರ್ಟಿ ಸಖತ್ ಪ್ಲಾನ್ ಮಾಡುತ್ತಿದೆ. ಅದರ ಭಾಗವಾಗಿಯೇ ಭಾರತದ ಅತಿ ಎತ್ತರದ ಮನುಷ್ಯ ಧರ್ಮೇಂದ್ರ ಪ್ರತಾಪ್ ಸಿಂಗ್ ಗೆ ಮಣೆ ಹಾಕಿದೆ. ಧರ್ಮೇಂದ್ರ ಪ್ರತಾಪ್ ಸಿಂಗ್ ಅವರು ಶನಿವಾರ ಅಧಿಕೃತವಾಗಿ ಸಮಾಜವಾದಿ ಪಾರ್ಟಿ ಸೇರಿದ್ದಾರೆ.
ಉತ್ತರ ಪ್ರದೇಶದ ಪ್ರತಾಪಗಢ ಮೂಲದವರಾದ ಧರ್ಮೇಂದ್ರ ಸಿಂಗ್ ಅವರು 8.1 ಅಡಿ ಎತ್ತರ ಇದ್ದಾರೆ. ಇವರು ಅಖಿಲೇಶ್ ಯಾದವ್ ಮತ್ತು ಸಮಾಜವಾದಿ ಪಾರ್ಟಿಯ ರಾಜ್ಯಾಧ್ಯಕ್ಷ ನರೇಶ್ ಉತ್ತಮ್ ಪಟೇಲ್ ಸಮ್ಮುಖದಲ್ಲಿ ಸೈಕಲ್ ಬಾವುಟ ಹಿಡಿದಿದ್ದಾರೆ. ಈ ಬಗ್ಗೆ ಮಾತನಾಡಿರುವ ನರೇಶ್ ಉತ್ತಮ್ ಪಟೇಲ್, ಧರ್ಮೇಂದ್ರ ಸಿಂಗ್ ಅವರು ನಮ್ಮ ಪಕ್ಷಕ್ಕೆ ಸೇರಿದ್ದು, ಚುನಾವಣೆಗೆ ಪಕ್ಷಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಫೆಬ್ರವರಿ 10ರಿಂದ ಮಾರ್ಚ್ 7ರವರೆಗೆ ವಿವಿಧ ಹಂತಗಳಲ್ಲಿ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ.









