india-tour-of-zimbabwe | ಭಾರತ ಮೇಲೆ ಜಿಂಬಾಬ್ವೆ ಬಾಲಂಗೋಚಿಗಳ ಹೊಸ ದಾಖಲೆ
ಹರಾರೆ ವೇದಿಕೆಯಾಗಿ ನಡೆದ ಜಿಂಬಾಬ್ವೆ – ಭಾರತ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1 – 0 ಅಂತರದೊಂದಿಗೆ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಸಾಕಷ್ಟು ದಿನಗಳ ಬಳಿಕ ಟೀಂ ಇಂಡಿಯಾಗೆ ವಾಪಸ್ ಆದ ದೀಪಕ್ ಚಹಾರ್ ಬೊಂಬಾಟ್ ಬೌಲಿಂಗ್ ಮಾಡಿದರು. ಪರಿಣಾಮ ಜಿಂಬಾಬ್ವೆ ತಂಡ 44.3 ಓವರ್ ಗಳಿಗೆ 189 ರನ್ ಗಳಿಗೆ ಆಲೌಟ್ ಆಯ್ತು. ದೀಪಕ್ ಚಹಾರ್, ಪ್ರಸಿದ್ಧ ಕೃಷ್ಣಾ, ಅಕ್ಷರ್ ಪಟೇಲ್ ತಲಾ ಮೂರು ವಿಕೆಟ್ ಪಡೆದರು.
ಒಂದು ಹಂತದಲ್ಲಿ ಜಿಂಬಾಬ್ವೆ 150ರ ಗಡಿ ದಾಟುವುದು ಅನುಮಾನವಾಗಿತ್ತು.
ಈ ಹಂತದಲ್ಲಿ ಜಿಂಬ್ವಾಬೆ ತಂಡಕ್ಕೆ ಬಾಲಂಗೋಚಿಗಳು ನೆರವಾದರು. ಕೊನೆಯಲ್ಲಿ ಲೂಕ್ ಜೋಗ್ವೆ 33 ರನ್, ಬ್ರಾಡ್ಲೆ ಎವಾನ್ಸ್ 34 ರನ್ ಗಳಿಸಿ ತಂಡದ ಮೊತ್ತ ಹಿಗ್ಗಿಸಿದರು. ಇನ್ನುಳಿದಂತೆ ನಾಯಕ ರೆಗಿಸ್ ಚಕಬ್ವಾ 35 ರನ್ ಗಳಿಸಿದರು.
ಪಂದ್ಯ ಗೆಲ್ಲಲು 190 ರನ್ ಗಳ ಗುರಿಯೊಂದಿಗೆ ಮೈದಾನಕ್ಕೆ ಇಳಿದ ಟೀಂ ಇಂಡಿಯಾಗೆ ಶಿಖರ್ ಧವನ್, ಶುಭ್ ಮನ್ ಗಿಲ್ ಉತ್ತಮ ಆರಂಭ ನೀಡಿದರು. ಪರಿಣಾಮ ಸುಲಭವಾಗಿ ಟೀಂ ಇಂಡಿಯಾ ಗುರಿ ಮುಟ್ಟಿತ್ತು.
ಆದ್ರೆ ಈ ಪಂದ್ಯದಲ್ಲಿ ಜಿಂಬಾಬ್ವೆ ತಂಡದ ಬಾಲಂಗೋಚಿಗಳು ಟೀಂ ಇಂಡಿಯಾದ ಬೌಲರ್ ಗಳನ್ನು ಕಾಡಿದರು. ಲೂಕ್ ಜೋಗ್ವೆ 33 ರನ್, ಬ್ರಾಡ್ಲೆ ಎವಾನ್ಸ್ 34 ರನ್ ಗಳಿಸಿ ಟೀಂ ಇಂಡಿಯಾಗೆ ಮುಳುವಾದರು. ಈ ಜೋಡಿ 9 ನೇ ವಿಕೆಟ್ ಗೆ 70 ರನ್ ಗಳ ಜೊತೆಯಾಟವನ್ನು ನೀಡಿದರು.
ಇದರೊಂದಿಗೆ ಟೀಂ ಇಂಡಿಯಾ ವಿರುದ್ಧ ಹೊಸ ದಾಖಲೆಯನ್ನು ನಿರ್ಮಿಸಿದರು. ಏಕದಿನ ಕ್ರಿಕೆಟ್ ಮಾದರಿಯಲ್ಲಿ ಒಂಭತ್ತನೇ ವಿಕೆಟ್ ಗೆ ಅತ್ಯಧಿಕ ಜೊತೆಯಾಟವನ್ನು ನೀಡಿದ ಜೋಡಿಯಾಗಿ ದಾಖಲೆ ಪುಟ ಸೇರಿದರು.