Dinesh karthik | ಪಂತ್ ಗೆ ಕೋಕ್ ಕೊಟ್ಟು ಡಿಕೆಗೆ ಚಾನ್ಸ್ ಕೊಟ್ಟಿದ್ದೇಕೆ ?
ಪಾಕಿಸ್ತಾನ ತಂಡದ ವಿರುದ್ದದ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಪೈಡರ್ ರಿಷಬ್ ಪಂತ್ ಅವರನ್ನು ಕೈಬಿಟ್ಟಿದ್ದು ಎಲ್ಲರನ್ನು ಅಚ್ಚರಿಗೊಳಿಸಿದೆ.
ಏಷ್ಯಾಕಪ್ ಭಾಗವಾಗಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಎದುರಿಸಿದ್ದು, ಐದು ವಿಕೆಟ್ ಗಳ ಗೆಲುವು ದಾಖಲಿಸಿದೆ.
ಈ ಪಂದ್ಯದಲ್ಲಿ ರಿಷಬ್ ಪಂತ್ ಅವರನ್ನ ಪಕ್ಕಕ್ಕೆ ಇಟ್ಟು ದಿನೇಶ್ ಕಾರ್ತಿಕ್ ಗೆ ಅವಕಾಶ ನೀಡಲಾಯ್ತು.
ಪಂದ್ಯದ ಟಾಸ್ ವೇಳೆ ರೋಹಿತ್ ಶರ್ಮಾ ವಿಕೆಟ್ ಕೀಪರ್ ಸ್ಥಾನದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ತಂಡಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದರು.
ರೋಹಿತ್ ಶರ್ಮಾ ಅವರ ಈ ನಿರ್ಧಾರದ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ.
ಆದ್ರೆ ತಂಡದಲ್ಲಿ ಒಂದನೇ ಕ್ರಮಾಂಕದಿಂದ ಏಳನೇ ಸ್ಥಾನದವರೆಗೆ ಜಡೇಜಾ ಅವರನ್ನು ಬಿಟ್ಟು ಲೆಫ್ಟ್ ಹ್ಯಾಂಡ್ ಬ್ಯಾಟರ್ ಗಳೇ ಇಲ್ಲ.
ತಂಡ ಸಮತೋಲನವಾಗಿರಬೇಕಾದರೆ ಲೆಫ್ಟ್ – ರೈಟ್ ಕಾಂಬಿನೇಷನ್ ಇರಬೇಕಾಗುತ್ತದೆ.
ಈ ಸಣ್ಣ ಲಾಜಿಕ್ ಅನ್ನು ರೋಹಿತ್ ಶರ್ಮಾ ಮರೆತುಹೋಗಿದ್ದಾರೆ ಎಂದು ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.
ಇನ್ನು ಕಳೆದ ಟಿ 20 ವಿಶ್ವಕಪ್ ಬಳಿಕ ದಿನೇಶ್ ಕಾರ್ತಿಕ್ ತಮ್ಮ ಕೆರಿಯರ್ ನ ಬೆಸ್ಟ್ ಫಾರ್ಮ್ ನಲ್ಲಿದ್ದಾರೆ.
ಮುಖ್ಯವಾಗಿ ಅವರು ಮ್ಯಾಚ್ ಫಿನಿಷರ್ ಆಗಿ ಗುರುತಿಸಿಕೊಂಡಿದ್ದಾರೆ.

ಮತ್ತೊಂದು ಕಡೆ ರಿಷಬ್ ಪಂತ್ ಮಾತ್ರ ಬೇಜವಾಬ್ದಾರಿ ಶಾಟ್ ಗಳನ್ನು ಆಡುತ್ತಾ ಟೀಕೆಗಳನ್ನು ಎದುರಿಸುತ್ತಿದ್ದಾರೆ.
ತಂಡ ಸಂಕಷ್ಟದಲ್ಲಿದ್ದರೂ ರಿಷಬ್ ಪಂತ್ ತನ್ನ ಆಟದ ವೈಖರಿ ಬದಲಿಸಿಕೊಳ್ಳದೇ ಆಡುತ್ತಾರೆ.
ಹೀಗಾಗಿ ಅವರ ಬದಲಿಗೆ ಅನುಭವಿ ದಿನೇಶ್ ಕಾರ್ತಿಕ್ ಗೆ ಅವಕಾಶ ನೀಡಲಾಗಿದೆ ಎಂದು ಕೆಲವರು ವಾದಿಸುತ್ತಿದ್ದಾರೆ.
ಅಲ್ಲದೆ ಮಹತ್ವದ ಪಂದ್ಯಗಳಲ್ಲಿ ಕೊನೆಯಲ್ಲಿ ಹೆಚ್ಚು ರನ್ ಗಳ ಅವಶ್ಯಕತೆ ಇದ್ದರೇ ಕ್ರೀಸ್ ನಲ್ಲಿ ರಿಷಬ್ ಗಿಂತ ದಿನೇಶ್ ಕಾರ್ತಿಕ್ ಆಡುವುದು ಉತ್ತಮ ಎನ್ನುವುದು ಕ್ರಿಕೆಟ್ ಪಂಡಿತರ ವಾದವಾಗಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೇ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಮೊದಲ ಬೌಲಿಂಗ್ ಆಯ್ಕೆ ಮಾಡಿಕೊಂಡು ಪಾಕ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು.
ರೋಹಿತ್ ಶರ್ಮಾರ ನಿರ್ಧಾರವನ್ನು ಸಮರ್ಥಿಸುವಂತೆ ಭಾರತೀಯ ಬೌಲರ್ ಗಳು ದಾಳಿ ನಡೆಸಿದರು. ಪಾಕ್ ನಿಗದಿತ 19.5 ಓವರ್ ಗಳಲ್ಲಿ 147 ರನ್ ಗಳಿಗೆ ಆಲೌಟ್ ಆಯಿತು.
ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ 19.4 ವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಸೇರಿಸಿ ಜಯ ಸಾಧಿಸಿತು.
ದಿನೇಶ್ ಕಾರ್ತಿಕ್ ಗೆ ಈ ಪಂದ್ಯದಲ್ಲಿ ಹೆಚ್ಚು ಅವಕಾಶ ಸಿಗಲಿಲ್ಲ. ಕೊನೆಯ ಓವರ್ ನಲ್ಲಿ ಕಣಕ್ಕಿಳಿದು ಒಂದು ರನ್ ಗಳಿಸಿದರು.








