ಅಫ್ಘನ್ ವೈಮಾನಿಕ ದಾಳಿ : 200ಕ್ಕೂ ಹೆಚ್ಚು ಉಗ್ರರು ಸಾವು
ಕಾಬೂಲ್ : ತಾಲಿಬಾನ್ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಅಫ್ಘಾನಿಸ್ತಾನದ ಶೆಬರ್ಗಾನ್ ನಗರದಲ್ಲಿ ಅಫ್ಘನ್ ವಾಯುಪಡೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ತಾಲಿಬಾನ್ ಉಗ್ರ ಸಂಘಟನೆ ಭಾರಿ ಪ್ರಮಾಣದ ಸಾವು-ನೋವು ಅನುಭವಿಸಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ವೈಮಾನಿಕ ದಾಳಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ. ಜೊತೆಗೆ ಉಗ್ರರ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಅವರ 100ಕ್ಕೂ ಹೆಚ್ಚು ವಾಹನಗಳು ನಾಶವಾಗಿವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಫವಾದ್ ಅಮನ್ ಮಾಹಿತಿ ನೀಡಿದ್ದಾರೆ.
ಇತ್ತ ಅಫ್ಘಾನ್ ನಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ಎರಡು ಪ್ರಾಂತ್ಯಗಳಲ್ಲಿ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದು, ಇದರಲ್ಲಿ 11 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. 64 ಜನರು ಗಾಯಗೊಂಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ತಾಲಿಬಾನಿಗಳು ಅಫ್ಘಾನಿಸ್ತಾನದ ಪ್ರಾದೇಶಿಕ ರಾಜಧಾನಿ ಕುಂಡುಜ್ ಅನ್ನು ತಮ್ಮ ಸ್ವಾಧೀನಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.









