5 ಅತಿ ಸುಲಭ , ರುಚಿಕರ ಅಡುಗೆ ರೆಸಿಪಿಗಳು ನಿಮಗಾಗಿ…!
ಗೋಧಿ ಹಲ್ವಾ
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು – 1 ಕಪ್
ತುಪ್ಪ – 1 ಕಪ್
ಸಕ್ಕರೆ – 1 ಕಪ್
ಹಾಲು – 1 ಕಪ್
ನೀರು – ಅಗತ್ಯವಿರುವಷ್ಟು
ಏಲಕ್ಕಿ- 1
ದ್ರಾಕ್ಷಿ, ಗೋಡಂಬಿ – ಸ್ವಲ್ಪ

ಮಾಡುವ ವಿಧಾನ:
ಮೊದಲು ಬಾಣಲೆ ಬಿಸಿ ಮಾಡಿ ತುಪ್ಪ ಹಾಕಿ ಕಾಯಿಸಿ. ನಂತರ ಅದಕ್ಕೆ ಗೋಧಿ ಹಿಟ್ಟನ್ನು ಸೇರಿಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಿರಿ.
ಗೋಧಿ ಹಿಟ್ಟು ಕಂದು ಬಣ್ಣಕ್ಕೆ ತಿರುಗಿದಾಗ ಸಕ್ಕರೆ ಹಾಕಿ. ನಂತರ ಸ್ವಲ್ಪ ಸ್ವಲ್ಪವೇ ಹಾಲನ್ನು ನಿಧಾನಕ್ಕೆ ಮಿಶ್ರ ಮಾಡುತ್ತಾ ಹಾಕಿ. ನಂತರ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ , ಚೆನ್ನಾಗಿ ಬೆರೆಸಿ.
ಬಾಣಲೆಯಲ್ಲಿ ಗೋಧಿ ಮಿಶ್ರಣ ತಳ ಬಿಟ್ಟಾಗ ಅದಕ್ಕೆ ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಮತ್ತು ಏಲಕ್ಕಿ ಸೇರಿಸಿ ತುಪ್ಪ ಸವರಿದ ಪ್ಲೇಟ್ ಗೆ ಹಾಕಿ. ಈಗ ರುಚಿಯಾದ ಗೋಧಿ ಹಲ್ವಾ ಸವಿಯಲು ಸಿದ್ಧ.
ಗೋಧಿ ಬರ್ಫಿ
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು – 1 ಕಪ್
ತುಪ್ಪ – 1/2 ಕಪ್
ಬೆಲ್ಲದ ಹುಡಿ – 1 ಕಪ್
ಮಾಡುವ ವಿಧಾನ

ಮೊದಲಿಗೆ ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ತುಪ್ಪ ಕರಗಿದ ಬಳಿಕ ಅದಕ್ಕೆ ಸ್ವಲ್ಪ ಸ್ವಲ್ಪವೇ ಗೋಧಿ ಹಿಟ್ಟನ್ನು ಹಾಕುತ್ತಾ ಚೆನ್ನಾಗಿ ಮಿಶ್ರ ಮಾಡಿ. ಬಳಿಕ ಗೋಧಿ ಹಿಟ್ಟನ್ನು ಪರಿಮಳ ಬರುವವರೆಗೆ ಹುರಿಯುತ್ತಾ ಇರಿ. ನಂತರ ಇದಕ್ಕೆ ಬೆಲ್ಲದ ಹುಡಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.
ಈ ಮಿಶ್ರಣ ಬಾಣಲೆಯ ತಳ ಬಿಡುವವರೆಗೆ ಚೆನ್ನಾಗಿ ಕೈಯಾಡಿಸುತ್ತಾ ಇರಿ. ಬಳಿಕ ತುಪ್ಪ ಸವರಿದ ತಟ್ಟೆಗೆ ಈ ಮಿಶ್ರಣವನ್ನು ಹಾಕಿ ಹತ್ತು ನಿಮಿಷ ಹಾಗೆಯೇ ಬಿಡಿ. ನಂತರ ಅದನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ.
ಬೆಣ್ಣೆ ಚಕ್ಕುಲಿ
ಬೇಕಾಗುವ ಸಾಮಾಗ್ರಿಗಳು
ಉದ್ದಿನ ಬೇಳೆ- 1/2 ಕಪ್
ಅಕ್ಕಿ ಹಿಟ್ಟು- 2 ಕಪ್
ಬೆಣ್ಣೆ – 3 ಚಮಚ
ನೀರು -1.5 ಕಪ್
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ
ಮೊದಲು ಉದ್ದಿನ ಬೇಳೆಯನ್ನು ತೊಳೆದು 1.5 ಕಪ್ ನೀರು ಸೇರಿಸಿ 3-4 ವಿಸಲ್ ಬರುವವರೆಗೆ ಬೇಯಿಸಿ. ನಂತರ ಒಂದು ಬೌಲ್ ಗೆ ಉದ್ದಿನ ಬೇಳೆಯನ್ನು ನೀರಿನ ಜೊತೆ ವರ್ಗಾಯಿಸಿ. ಅದಕ್ಕೆ ಅಕ್ಕಿ ಹಿಟ್ಟು, ಉಪ್ಪು, ಇಂಗು, ಬಿಸಿ ಮಾಡಿದ ಬೆಣ್ಣೆ ಸೇರಿಸಿ ಚೆನ್ನಾಗಿ ಕಲಸಿ.ನೀರಿನ ಅಗತ್ಯವಿದ್ದರೆ ಸ್ವಲ್ಪ ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ.
ಈಗ ಚಕ್ಕುಲಿ ಅಚ್ಚಿಗೆ ಹಾಕಿ ಒತ್ತಿ ಕಾದ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಹೊಂಬಣ್ಣಕ್ಕೆ ತಿರುಗುವವರೆಗೆ ಚಕ್ಕುಲಿಯನ್ನು ಕರಿದು ತೆಗೆಯಿರಿ.
ಬಾದಾಮಿ ಬರ್ಫಿ
ಬೇಕಾಗಿರುವ ಸಾಮಾಗ್ರಿಗಳು
ಬಾದಾಮಿ – 1ಕಪ್
ಗೋಡಂಬಿ – 1/4ಕಪ್
ಸಕ್ಕರೆ – 1 ಕಪ್
ಹಾಲು – 1/2 ಕಪ್
ಹಾಲಿನ ಪುಡಿ – 1/4 ಕಪ್
ತುಪ್ಪ – 2ಚಮಚ
ಮಾಡುವ ವಿಧಾನ

ಮೊದಲಿಗೆ ಬಾದಾಮಿ ನೆನೆಸಿ ಸಿಪ್ಪೆ ತೆಗೆದಿಡಿ. ನಂತರ ಬಾದಾಮಿ, ಗೋಡಂಬಿ, ಹಾಲು ಸೇರಿಸಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಬಳಿಕ ಬಾಣಲೆಗೆ ತುಪ್ಪ ಸೇರಿಸಿ ಬಿಸಿ ಮಾಡಿ. ನಂತರ ರುಬ್ಬಿರುವ ಪೇಸ್ಟ್ ಸೇರಿಸಿ ಕೈಯಾಡಿಸುತ್ತಾ ಇರಿ. ಅದಕ್ಕೆ ಸಕ್ಕರೆ ಸೇರಿಸಿ, ಸ್ವಲ್ಪ ಗಟ್ಟಿ ಆದಾಗ ಹಾಲಿನ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ. ಮಿಶ್ರಣವು ಬರ್ಫಿ ಹದಕ್ಕೆ ಬಂದಾಗ ಅದಕ್ಕೆ ಒಂದು ಚಮಚ ತುಪ್ಪ ಸೇರಿಸಿ ಕೈಯಾಡಿಸಿ. ನಂತರ ತುಪ್ಪ ಸವರಿದ ಪ್ಲೇಟ್ ಗೆ ಹಾಕಿ ಕತ್ತರಿಸಿ.
ಬ್ರೆಡ್ ಉಳಿದಿದ್ದರೆ ತಯಾರಿಸಿ ರುಚಿಯಾದ ಚಾಟ್
ಬೇಕಾಗುವ ಸಾಮಾಗ್ರಿಗಳು
ಬ್ರೇಡ್ ತುಂಡುಗಳು – 4
ಆಲೂಗಡ್ಡೆ – 1
ಟೊಮೆಟೊ – 1
ಕೊತ್ತಂಬರಿ ಸೊಪ್ಪು – ಸ್ವಲ್ಪ
ಈರುಳ್ಳಿ – 1
ಜೀರಿಗೆ ಪುಡಿ – 1/2 ಚಮಚ
ಕೆಂಪು ಮೆಣಸಿನಹುಡಿ – 1/2 ಚಮಚ
ಚಾಟ್ ಮಸಾಲಾ 1/4 ಚಮಚ
ಮೊಸರು – 1 ಚಮಚ
ಹಸಿರು ಚಟ್ನಿ -1/2 ಚಮಚ
ಹುಣಸೆ ಚಟ್ನಿ – 1/2 ಚಮಚ

ಮಾಡುವ ವಿಧಾನ
ಮೊದಲು ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ. ನಂತರ ಬ್ರೆಡ್ ಅನ್ನು ಅದರಲ್ಲಿ ಬಿಸಿ ಮಾಡಿ. ಬ್ರೆಡ್ ಗೋಲ್ಡನ್ ಬಣ್ಣಕ್ಕೆ ತಿರುಗುವವರೆಗೆ ಮತ್ತು ಗರಿಗರಿಯಾಗುವವರೆಗೆ ಕಾಯಿಸಿ.
ಈಗ ಬ್ರೆಡ್ ಗಳನ್ನು ಪ್ರತ್ಯೇಕ ತಟ್ಟೆಯಲ್ಲಿ ಇರಿಸಿಕೊಳ್ಳಿ.
ಆಲೂಗಡ್ಡೆಯನ್ನು ಬೇಯಿಸಿ ಅದರ ಸಿಪ್ಪೆ ತೆಗೆದು ಮ್ಯಾಶ್ ಮಾಡಿ. ನಂತರ ಅದಕ್ಕೆ ಕತ್ತರಿಸಿದ ಟೊಮೆಟೊ, ಕೊತ್ತಂಬರಿ ಮತ್ತು ಈರುಳ್ಳಿ ಸೇರಿಸಿ. ಇದಕ್ಕೆ ಹುರಿದ ಜೀರಿಗೆ, ಉಪ್ಪು, ಕೆಂಪು ಮೆಣಸಿನಹುಡಿ, ಚಾಟ್ ಮಸಾಲಾ ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿ. ಮಸಾಲೆಗಳು ಚೆನ್ನಾಗಿ ಬೆರೆಯುವಂತೆ ಎಲ್ಲವನ್ನೂ ಬೆರೆಸಿ.
ಈ ಆಲೂಗಡ್ಡೆ ಮಿಶ್ರಣವನ್ನು ಬ್ರೆಡ್ ಮೇಲೆ ಇರಿಸಿ. ಅದರ ಮೇಲೆ ಮೊಸರು, ಹಸಿರು ಚಟ್ನಿ, ಹುಣಸೆ ಚಟ್ನಿ ಸವರಿ
ಈಗ ಸ್ವಲ್ಪ ಕಪ್ಪು ಉಪ್ಪು, ಖಾರ ಅಥವಾ ಭುಜಿಯಾ ಮತ್ತು ಪಾಪಡಿ ಇದ್ದರೆ, ಅವುಗಳನ್ನು ಪುಡಿಮಾಡಿ ಹಾಕಿ.
ಕೊನೆಯಲ್ಲಿ ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಕೆಲವು ದಾಳಿಂಬೆಗಳನ್ನು ಸೇರಿಸಿ ಅಲಂಕರಿಸಿ.
ನಿಮ್ಮ ರುಚಿಗೆ ತಕ್ಕಂತೆ ಹಸಿ ಮೆಣಸಿನಕಾಯಿ ಚಟ್ನಿ ಸೇರಿಸಬಹುದು.








