ಬೆಲೆ ಏರಿಕೆ | ಟ್ವಿಟ್ಟರ್ ನಲ್ಲಿ ದಿನೇಶ್ ಗುಂಡೂರಾವ್ – ಸಿ.ಟಿ.ರವಿ ಗುದ್ದಾಟ
ಬೆಂಗಳೂರು : ದೇಶದಲ್ಲಿ ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿದೆ. ಇದನ್ನು ಖಂಡಿಸಿ ವಿಪಕ್ಷಗಳು ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿವೆ. ಈ ಮಧ್ಯೆ ರಾಜ್ಯದಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಧ್ಯೆ ಟ್ವಿಟ್ಟರ್ ನಲ್ಲಿ ಗುದ್ದಾಟ ಮುಂದುವರೆದಿದೆ.
ಬೆಲೆ ಏರಿಕೆ ಖಂಡಿಸಿ ದಿನೇಶ್ ಗುಂಡೂರಾವ್, ಚಳವಳಿ ಮಾಡುವಷ್ಟು ಬೆಲೆಯೇರಿಕೆ ಆಗಿಲ್ಲ ಎಂದಿರುವ ಸಿ.ಟಿ.ರವಿ ಈ ರಾಜ್ಯದ ಪ್ರಥಮ ದರ್ಜೆಯ ಅವಿವೇಕಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಜನರ ಸಮಸ್ಯೆಗಳ ಅರಿವೇ ಇಲ್ಲದೆ ಮಾತನಾಡುವ ಇವರು ಜನನಾಯಕರೇ? ರವಿಯಂತಹ ಕೋಟಿ ಕುಳಗಳಿಗೆ ಬೆಲೆಯೇರಿಕೆ ಸಮಸ್ಯೆಯಿಲ್ಲದಿರಬಹುದು. ಆದರೆ ಚಳವಳಿ ಮಾಡದಿರಲು ಎಲ್ಲರೂ ಸಿ.ಟಿ.ರವಿಯಂತೆ ಕೋಟಿ ಕುಳಗಳೆ?
ಬೆಲೆಯೇರಿಕೆಯನ್ನು ನಾಚಿಕೆ ಬಿಟ್ಟು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರು ಸರ್ಟಿಫೈಡ್ ಕಿರಾತಕರಿದ್ದಂತೆ. ಹೊಟ್ಟೆ ಬಟ್ಟೆ ಕಟ್ಟಿ ಸಂಸಾರ ನಡೆಸುವವನಿಗೆ ಬೆಲೆಯೇರಿಕೆಯ ತಾಪವೇನು ಎಂದು ಗೊತ್ತಿದೆ. ಆದರೆ ಹೃದಯವೇ ಇಲ್ಲದ ಕಿರಾತಕರಿಗೆ ಜನರ ಗೋಳು ಹೇಗೆ ತಿಳಿಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಟಾಂಗ್ ನೀಡಿರುವ ಸಿ.ಟಿ.ರವಿ, ಶ್ರೀ ದಿನೇಶ್ ಗುಂಡೂರಾವ್ ಅವರೇ, 2014 ರಲ್ಲಿ ಅಡುಗೆ ಅನಿಲದ ಬೆಲೆ ಎಷ್ಟಿತ್ತು ಗೊತ್ತೇ? 1241 ರೂ. ಈಗ 887 ರೂ. ಆಗ ಕೋವಿಡ್ ನಂತಹ ಸಾಂಕ್ರಾಮಿಕ ಕಾಯಿಲೆಯ ಪಿಡುಗು ದೇಶವನ್ನು ಬಾಧಿಸುತ್ತಿರಲಿಲ್ಲ. ಕೋವಿಡ್ ನಂತಹ ವಿಷಮ ಸನ್ನಿವೇಶದಲ್ಲೂ ಹಣದುಬ್ಬರವನ್ನು ಗರಿಷ್ಠ ಮಟ್ಟದಲ್ಲಿ ನಿಯಂತ್ರಣದಲ್ಲಿಡಲು ನಮ್ಮ ಸರಕಾರ ಪ್ರಯತ್ನಿಸಿದೆ ಎಂಬ ಅರಿವಿರಲಿ ಎಂದು ಕುಟುಕಿದ್ದಾರೆ.