ಹೊಸದೆಹಲಿ: ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಮತ್ತು ಯೋಗ ಗುರು ಬಾಬಾ ರಾಮ್ದೇವ್ ನಡುವಿನ ವಾಕ್ಸಮರ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಿನ್ ಝಿ (Gen Z) ಯುವಪೀಳಿಗೆಯ ಕುರಿತಾದ ಹೇಳಿಕೆಯಿಂದ ಆರಂಭವಾದ ಈ ವಿವಾದ, ಇದೀಗ ವೈಯಕ್ತಿಕ ಕೆಸರೆರಚಾಟಕ್ಕೆ ನಾಂದಿ ಹಾಡಿದೆ. ಬಾಬಾ ರಾಮ್ದೇವ್ ಅವರ ಸುದೀರ್ಘ ವಾಗ್ದಾಳಿಗೆ ಕಟು ಶಬ್ದಗಳಲ್ಲಿ ಉತ್ತರ ನೀಡಿರುವ ಕಂಗನಾ, ನನ್ನ ಯೌವನ ಮತ್ತು ವೈಯಕ್ತಿಕ ಜೀವನದ ಬಗ್ಗೆ ಹಗಲುಗನಸು ಕಾಣುವುದನ್ನು ನಿಲ್ಲಿಸಿ ಎಂದು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ನನ್ನ ವ್ಯಕ್ತಿತ್ವಕ್ಕೆ ಪಾಠ ಮಾಡಲು ಬರಬೇಡಿ
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘವಾದ ಪೋಸ್ಟ್ ಹಂಚಿಕೊಂಡಿರುವ ಕಂಗನಾ ರಣಾವತ್, ಬಾಬಾ ರಾಮ್ದೇವ್ ಅವರಿಗೆ ನೇರ ಸವಾಲು ಹಾಕಿದ್ದಾರೆ. ನನ್ನ ಯೌವನ ಅಥವಾ ಬೆಡ್ರೂಮ್ ಕುರಿತು ಊಹಾಪೋಹಗಳನ್ನು ಮಾಡುತ್ತಾ ಹಗಲುಗನಸು ಕಾಣುವುದನ್ನು ಬಾಬಾ ರಾಮ್ದೇವ್ ತಕ್ಷಣವೇ ನಿಲ್ಲಿಸಬೇಕು. ಕೇವಲ ವದಂತಿಗಳು ಮತ್ತು ಗಾಸಿಪ್ಗಳ ಆಧಾರದ ಮೇಲೆ ನನ್ನ ವ್ಯಕ್ತಿತ್ವವನ್ನು ಅಳೆಯುವುದು ಮತ್ತು ನನಗೆ ನೀತಿ ಬೋಧನೆ ಮಾಡುವುದು ಸೂಕ್ತವಲ್ಲ ಎಂದು ಕಂಗನಾ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಛೀಮಾರಿ ನೆನಪಿಸಿ ತಿವಿದ ಕಂಗನಾ
ಇಷ್ಟಕ್ಕೇ ಮುಗಿಯದ ಕಂಗನಾ, ಪತಂಜಲಿ ಸಂಸ್ಥೆಯ ತಪ್ಪು ವೈದ್ಯಕೀಯ ಜಾಹೀರಾತುಗಳ ವಿವಾದವನ್ನು ಪ್ರಸ್ತಾಪಿಸಿ ರಾಮ್ದೇವ್ ಅವರಿಗೆ ಕೌಂಟರ್ ನೀಡಿದ್ದಾರೆ. ಸುಳ್ಳು ಮತ್ತು ದೇಶದ ಜನರನ್ನು ದಾರಿ ತಪ್ಪಿಸುವ ವೈದ್ಯಕೀಯ ಜಾಹೀರಾತುಗಳನ್ನು ನೀಡಿದ್ದಕ್ಕಾಗಿ ನನಗೆ ಸುಪ್ರೀಂ ಕೋರ್ಟ್ನಿಂದ ಎಂದಿಗೂ ಛೀಮಾರಿ ಬಿದ್ದಿಲ್ಲ. ನಿಮ್ಮ ಮೇಲಿರುವ ಆರೋಪಗಳು ದೇಶದ ಅತ್ಯುನ್ನತ ನ್ಯಾಯಾಲಯದ ದಾಖಲೆಗಳಲ್ಲಿವೆ. ಆದರೆ ನನ್ನ ಮೇಲಿರುವ ಮಾತುಗಳು ಕೇವಲ ಗಾಸಿಪ್ಗಳ ಆಧಾರಿತವಾಗಿವೆ ಎಂಬುದನ್ನು ಮರೆಯಬೇಡಿ ಎಂದು ಪತಂಜಲಿ ಸಂಸ್ಥೆಯ ಕಾನೂನು ಸಂಕಷ್ಟವನ್ನು ನೆನಪಿಸಿ ತಿರುಗೇಟು ನೀಡಿದ್ದಾರೆ.
ವಿವಾದ ಹುಟ್ಟಿಕೊಂಡಿದ್ದು ಹೇಗೆ?
ಇತ್ತೀಚೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ಇಂದಿನ ಯುವಪೀಳಿಗೆಯನ್ನು (Gen Z) ಗಟರ್ ಜನರೇಷನ್ (ಚರಂಡಿ ಪೀಳಿಗೆ) ಎಂದು ಕಂಗನಾ ಕರೆದಿದ್ದರು. ದೇಶದ ಯುವಶಕ್ತಿಯನ್ನು ಇಂತಹ ಕೆಟ್ಟ ಪದಗಳಿಂದ ಕರೆಯುವುದಕ್ಕೆ ಬಾಬಾ ರಾಮ್ದೇವ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಯುವಕರನ್ನು ನಿಂದಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದ ರಾಮ್ದೇವ್, ಕಂಗನಾ ಅವರ ಹಿಂದಿನ ಜೀವನಶೈಲಿ ಮತ್ತು ನಡೆನುಡಿಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಿ ಟೀಕಿಸಿದ್ದರು.
ಸದ್ಯ ಈ ಇಬ್ಬರು ಪ್ರಭಾವಿ ವ್ಯಕ್ತಿಗಳ ನಡುವಿನ ಸಾರ್ವಜನಿಕ ಸಮರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಬಿಜೆಪಿ ಸಂಸದೆಯಾದ ಮೇಲೆಯೂ ಕಂಗನಾ ತಮ್ಮ ಆಕ್ರಮಣಕಾರಿ ಶೈಲಿಯನ್ನು ಕಾಯ್ದುಕೊಂಡಿದ್ದು, ಈ ಕಟು ವಾಕ್ಸಮರ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ ಎಂಬುದು ಕುತೂಹಲ ಮೂಡಿಸಿದೆ.








