ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ರಾಜೀನಾಮೆಗೆ ಪಟ್ಟು ಹಿಡಿದಿರುವ ವಿಪಕ್ಷಗಳ ವಿರುದ್ಧ ಸಚಿವ ಬಿ ನಾಗೇಂದ್ರ ಭಾರಿ ವಾಗ್ದಾಳಿ ನಡೆಸಿದ್ದಾರೆ. ಮೂರು ದಿನಗಳ ಮೌನ ಮುರಿದು ವಿಧಾನಸೌಧದಲ್ಲಿ ದಾಖಲೆಗಳ ಸಮೇತ ಸುದ್ದಿಗೋಷ್ಠಿ ನಡೆಸಿದ ಸಚಿವರು, ತಮಗೆ ರಾಜ್ಯದ ಮತ್ತು ತಮ್ಮ ಸಮುದಾಯದ ಜನರಿಗೆ ಸತ್ಯ ತಿಳಿಸುವ ಹೊಣೆಗಾರಿಕೆ ಇದೆ ಎಂದು ಹೇಳಿ ವಿಪಕ್ಷಗಳ ಆರೋಪಗಳನ್ನು ತೀವ್ರವಾಗಿ ಖಂಡಿಸಿದರು. ದಲಿತ ನಾಯಕ ಮಂತ್ರಿಯಾಗಿದ್ದನ್ನು ಸಹಿಸದ ಮನುವಾದಿಗಳು ತಮ್ಮನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸಚಿವರು ಆಕ್ರೋಶ ಹೊರಹಾಕಿದ್ದಾರೆ.
ನನ್ನ ಖಾತೆಗೆ ಒಂದೇ ಒಂದು ರೂಪಾಯಿ ಬಂದಿಲ್ಲ
ಪ್ರಕರಣದ ವಿವರಗಳನ್ನು ಬಿಚ್ಚಿಟ್ಟ ಸಚಿವ ನಾಗೇಂದ್ರ, ವಾಲ್ಮೀಕಿ ನಿಗಮದಿಂದ ಒಂದು ಬ್ಯಾಂಕ್ಗೆ 187 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿದ್ದು ನನ್ನ ಅಥವಾ ಅಧ್ಯಕ್ಷರ ಗಮನಕ್ಕೆ ಬಂದಿರಲಿಲ್ಲ. ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತನಾಗಿ 100 ಕೋಟಿ ರೂಪಾಯಿ ಹಣವನ್ನು ಫ್ರೀಜ್ ಮಾಡಿಸಿದೆ. ತೆಲಂಗಾಣ ಮೂಲದ ಸುಮಾರು 800 ಖಾತೆಗಳಿಗೆ ಈ ಹಣ ವರ್ಗಾವಣೆಯಾಗಿತ್ತು. ತನಿಖೆಗೆ ಯಾವುದೇ ಅಡ್ಡಿಯಾಗಬಾರದು ಎನ್ನುವ ಕಾರಣಕ್ಕೆ ನಾನೇ ಸ್ವಯಂಪ್ರೇರಿತನಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಎಸ್ಐಟಿ ತನಿಖೆ ನಡೆಸಿ ಈಗಾಗಲೇ 79 ಕೋಟಿ ರೂಪಾಯಿ ಹಣವನ್ನು ವಾಪಸ್ ತಂದಿದೆ. ಎಸ್ಐಟಿ ತನಿಖೆಯಲ್ಲಿ ನನ್ನ ಖಾತೆಗೆ ಒಂದೇ ಒಂದು ರೂಪಾಯಿ ಕೂಡ ಬಂದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ವಿವರಿಸಿದರು.
ಸಾಯುವವರೆಗೂ ದಲಿತನಾಗಿಯೇ ಇರುತ್ತೇನೆ: ಸಂವಿಧಾನ ಪ್ರದರ್ಶನ
ತಮ್ಮ ಮಾತುಗಳ ಮಧ್ಯೆ ಭಾರತೀಯ ಸಂವಿಧಾನದ ಪುಸ್ತಕವನ್ನು ಪ್ರದರ್ಶಿಸಿದ ಸಚಿವರು, ದಲಿತನೊಬ್ಬ ಮಂತ್ರಿಯಾಗಿರುವುದನ್ನು ಸಹಿಸದೇ ಈ ಮನುವಾದಿಗಳು ಕೆಳಗಿಳಿಸಲು ಕುತಂತ್ರ ಮಾಡುತ್ತಿದ್ದಾರೆ. ದಲಿತರನ್ನು ಈ ದೇಶದಲ್ಲಿ ಮನುವಾದಿಗಳು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ನನ್ನ ಮೇಲಿನ ಆರೋಪವೇ ಉದಾಹರಣೆ. ಈ ಕೇಸ್ನಲ್ಲಿ ಏನಿದೆ ಎಂದು ನಾನು ರಾಜೀನಾಮೆ ಕೊಡಬೇಕು. ನಾನು ಹುಟ್ಟಿನಿಂದಲೂ ದಲಿತ, ಸಾಯುವವರೆಗೂ ದಲಿತನಾಗಿಯೇ ಇರುತ್ತೇನೆ. ನಮ್ಮನ್ನು ಈ ದೇಶದ ಸಂವಿಧಾನವೇ ಕಾಪಾಡುತ್ತಿದೆ ಎಂದರು.
ಬಿಜೆಪಿಯ 126 ಮಂತ್ರಿಗಳ ಮೇಲೆ ಗಂಭೀರ ಕೇಸ್ ಇದೆ
ತಮ್ಮ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿಗೆ ತಿರುಗೇಟು ನೀಡಿದ ನಾಗೇಂದ್ರ, ದೇಶದಲ್ಲಿ ಕೇಂದ್ರ ಸಚಿವರು ಸೇರಿದಂತೆ ಬಿಜೆಪಿಯ 326 ಮಂತ್ರಿಗಳಿದ್ದಾರೆ. ಅವರಲ್ಲಿ 126 ಮಂತ್ರಿಗಳ ಮೇಲೆ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಿವೆ. ಪಶ್ಚಿಮ ಬಂಗಾಳದ ಸುವೇಂದು ಅಧಿಕಾರಿ ಮೇಲೆಯೇ 20 ಕೇಸ್ಗಳಿವೆ. ಅವರಿಂದ ರಾಜೀನಾಮೆ ಪಡೆಯದ ಬಿಜೆಪಿಯವರು ನನ್ನ ರಾಜೀನಾಮೆ ಕೇಳುತ್ತಿರುವುದು ಏಕೆ? ಮೊದಲು ಸುವೇಂದು ಅಧಿಕಾರಿ ರಾಜೀನಾಮೆ ಪಡೆಯಿರಿ. ನಾನು ಜಾಮೀನಿನ ಮೇಲೆ ಹೊರಗಿದ್ದೇನೆ ನಿಜ, ಆದರೆ ಅಪರಾಧಿಯಲ್ಲ. ನಾನು ತಪ್ಪು ಮಾಡಿದ್ದರೆ ನ್ಯಾಯಾಲಯ ನೀಡುವ ತೀರ್ಪಿಗೆ ತಲೆಬಾಗುತ್ತೇನೆ. ನಾನು ಅಪರಾಧಿಯಾಗಿದ್ದರೆ ರಾಜ್ಯಪಾಲರು ನನಗೆ ಪ್ರಮಾಣ ವಚನ ಬೋಧಿಸಲು ಅವಕಾಶ ಕೊಡುತ್ತಿದ್ದರೆ ಎಂದು ಪ್ರಶ್ನಿಸಿದ ಸಚಿವರು, ವಿಪಕ್ಷಗಳಿಗೆ ಧೈರ್ಯವಿದ್ದರೆ ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.








