ಸಿಲಿಕಾನ್ ಸಿಟಿ ಇನ್ನು ಮುಂದೆ ಎಂದೂ ನಿದ್ರಿಸದ ನಗರವಾಗಿ ಹೊರಹೊಮ್ಮಲಿದೆ. ಗಾರ್ಡನ್ ಸಿಟಿಯನ್ನ 24/7 ನಗರವಾಗಿಸಲು ಬೆಂಗಳೂರು ನಗರ ಪೊಲೀಸರು ಸರ್ವರೀತಿ ಸಜ್ಜುಗೊಳ್ಳುತ್ತಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಎಫ್ ಕೆ ಸಿಸಿಐ ನ ಸದಸ್ಯರೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಭಾಸ್ಕರ್ ರಾವ್, ಬೆಂಗಳೂರು ನಗರವನ್ನ 24/7 ನಗರವಾಗಿಸಲು ನಮ್ಮ ಪೊಲೀಸ್ ಪಡೆಯನ್ನು ಸಜ್ಜುಗೊಳಿಸಲಾಗುತ್ತಿದೆ. ಬೆಂಗಳೂರನ್ನು 24/7 ನಗರವನ್ನಾಗಿಸಲು ಸಾರಿಗೆಯಂತಹ ಬೇರೆ ವ್ಯವಸ್ಥೆಗಳೆಡೆ ಗಮನಹರಿಸಬೇಕಾಗುತ್ತದೆ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.
ಬೆಂಗಳೂರಂತ ದೊಡ್ಡನಗರದ ಭದ್ರತೆಯ ದೃಷ್ಟಿಯಿಂದ ಹೊಯ್ಸಳ ಗಸ್ತು ವಾಹನಗಳ ಸಂಖ್ಯೆಯನ್ನು ಏರಿಕೆ ಮಾಡಲಾಗುತ್ತದೆ. ಈಗ 285 ಹೊಯ್ಸಳ ವಾಹನಗಳಿದ್ದು, ಪ್ರತಿಕ್ರಿಯೆ ನೀಡುವ ಸಮಯ ಸರಾಸರಿ 10 ನಿಮಿಷಗಳಿಂದ ಮೂರು ನಿಮಿಷಕ್ಕೆ ಇಳಿಸುವ ಪ್ರಸ್ತಾವನೆ ಇದೆ. ವಾಹನಗಳ ಸಂಖ್ಯೆ ಹೆಚ್ಚಿಸಲು ಗೃಹ ಇಲಾಖೆಗೆ ಮನವಿ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದ್ರು.
ಹಾಗೇ ನಿರ್ಭಯ ಯೋಜನೆಯಡಿ ನಗರಕ್ಕೆ 17,000 ಕ್ಯಾಮರಾಗಳು ಅಳವಡಿಸಲು ಯೋಜನೆ ಮಾಡಲಾಗಿದೆ. ಹಾಗೇಯೇ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬಹುಮಹಡಿ ಅತ್ಯಾಧುನಿಕ ಕಂಟೋಲ್ ರೂಮ್ ಸಹ ಸ್ಥಾಪನೆಯಾಗಲಿದೆ ಎಂದು ಹೇಳಿದ್ರು.
ಬೆಂಗಳೂರಿನಲ್ಲಿರುವ ವಲಸಿ ಉದ್ಯೋಗಿಗಳ ಕುರಿತು ಮಾತನಾಡಿದ ಭಾಸ್ಕರ್ ರಾವ್. ವಲಸಿಗರೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಹಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಉದ್ಯೋಗ ನೀಡುವವರು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ, ಉದ್ಯೋಗ ನೀಡುವವರು ವಲಸಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.








