ಭಯೋತ್ಪಾದನೆಯನ್ನು ಮೋದಿ ಸರ್ಕಾರ ಸಹಿಸುವುದಿಲ್ಲ : ಅಮಿತ್ ಶಾ
ಜಮ್ಮು ಕಾಶ್ಮೀರ : ಜಮ್ಮು ಕಾಶ್ಮೀರದ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪುಲ್ವಾಮಾದ ಲೆಥ್ಪೊರಾ ಪ್ರದೇಶದಲ್ಲಿ ಸಿಆರ್ಪಿಎಫ್ ಶಿಬಿರದಲ್ಲಿ ಸೋಮವಾರ ರಾತ್ರಿ ಕಳೆದರು. ಇಂದು ಭಯೋತ್ಪಾದನೆಯ ಬಗ್ಗೆ ಮಾತನಾಡಿರುವ ಅಮಿತ್ ಶಾ ಅವರು ಮೋದಿ ಸರ್ಕಾರ ಭಯೋತ್ಪಾದನೆಯನ್ನು ಸಹಿಸುವುದಿಲ್ಲ. ಜಮ್ಮು–ಕಾಶ್ಮೀರದಲ್ಲಿ ಈಗ ಸ್ವಲ್ಪ ಪರಿಸ್ಥಿತಿ ಸುಧಾರಿಸಿದೆ. ಆದರೆ ಸಂಪೂರ್ಣ ಶಾಂತಿ ನೆಲೆಸುವವರೆಗೂ ನಮಗೆ ತೃಪ್ತಿಯಿಲ್ಲ ಎಂದಿದ್ದಾರೆ.
ಇನ್ನೂ ಇದೇ ವೇಳೆ ಭದ್ರತಾ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ ಅವರು ನಿಮ್ಮ ಸಮಸ್ಯೆಗಳನ್ನು ಅರಿತುಕೊಳ್ಳುವುದಕ್ಕಾಗಿ ನಿಮ್ಮ ಜತೆ ಒಂದು ರಾತ್ರಿ ಕಳೆಯಲು ಬಂದಿದ್ದೇನೆ. ಜಮ್ಮು–ಕಾಶ್ಮೀರ ಭೇಟಿಯಲ್ಲಿ ಇದುವೇ ನನಗೆ ಬಹು ಮುಖ್ಯವಾದ ಅಂಶ ಎಂದು ಹೇಳಿದ್ದಾರೆ. ಅಲ್ಲದೇ ಜಮ್ಮು–ಕಾಶ್ಮೀರದಲ್ಲಿ ಈಗ ಕಾನೂನು ಸುವ್ಯವಸ್ಥೆ ಸುಧಾರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ನಮ್ಮ ಜೀವಿತಾವಧಿಯಲ್ಲಿ ನಾವು ಶಾಂತಿಯುತ ಜಮ್ಮು–ಕಾಶ್ಮೀರವನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಈಗ ಕಲ್ಲುತೂರಾಟ ಘಟನೆಗಳು ಈಗ ಅತಿ ವಿರಳವಾಗಿವೆ. ಕೆಲವು ಸಮಯ ಹಿಂದೆ ಕಾಶ್ಮೀರದಲ್ಲಿ ಕಲ್ಲುತೂರಾಟ ಸಾಮಾನ್ಯವಾಗಿತ್ತು. ಇಂಥ ಕೃತ್ಯಗಳು ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿವೆ. ಆದರೆ ಇದರಿಂದ ನಾವು ತೃಪ್ತಿಪಟ್ಟುಕೊಳ್ಳುವಂತಿಲ್ಲ ಎಂದಿರುವ ಅವರು ಭಯೋತ್ಪಾದನೆ ವಿರುದ್ಧ ಮೋದಿ ಸರ್ಕಾರ ಶೂನ್ಯ ಸಹನೆ ಹೊಂದಿದೆ. ನಾವು ಅದನ್ನ ಸಹಿಸೋದಿಲ್ಲ. ಅದು ಮಾನವೀಯತೆಗೆ ವಿರುದ್ಧವಾದದ್ದು, ಮಾನವೀಯತೆಯ ವಿರೋಧಿಗಳು ಹಾಗೂ ಕ್ರೌರ್ಯ ಎಸಗುವವರಿಂದ ಕಾಶ್ಮೀರದ ಜನರನ್ನು ರಕ್ಷಿವುಸುವುದು ನಮ್ಮ ಆದ್ಯತೆ ಎಂದಿದ್ದಾರೆ.







